ತುಮಕೂರು: ಅಪಘಾತಕ್ಕೀಡಾಗಿ ಮೃತಪಟ್ಟ 12 ವರ್ಷದ ಬಾಲಕಿ ಸಾವಿನಲ್ಲೂ ಸಾರ್ಥಕತೆ ತೋರಿದ್ದಾಳೆ. ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಚಂದನಾ ಎಂಬ ಬಾಲಕಿ ಆರು ಮಂದಿಯ ಜೀವಕ್ಕೆ ಬೆಳಕಾಗಿದ್ದಾಳೆ.
ಜಿಲ್ಲೆಯ ತಿಪಟೂರು ನಗರದ ಹಳೇಪಾಳ್ಯದ ನಿವಾಸಿಯಾಗಿದ್ದ ಚಂದನ ಅಲ್ಲಿನ ಶ್ರೀ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿನಿ. ಜುಲೈ 23ರಂದು ಆಕೆಗೆ ಅಪಘಾತವಾಗಿತ್ತು. ಸ್ಕೂಲ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಳು. ಈಕೆ ರಸ್ತೆ ದಾಟುವಾಗಲಾರಿ ಡಿಕ್ಕಿ ಹೊಡೆದು ತಲೆಗೆ ಪೆಟ್ಟಾಗಿತ್ತು. ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಚಂದನ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.
ತಮ್ಮ ಮಗಳ ಅಂಗಾಂಗವನ್ನು ದಾನ ಮಾಡಲು ಆಕೆಯ ತಂದೆ ತಾಯಿ ಒಪ್ಪಿದ್ದಾರೆ. ಪೋಷಕರ ನಿರ್ಧಾರಕ್ಕೆ ಆಸ್ಪತ್ರೆ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ.
ಚಂದನಳ ಅಂಗಾಂಗಗಳನ್ನು ಮೈಸೂರು ಹಾಗೂ ಬೆಂಗಳೂರಿನ 6 ಮಕ್ಕಳಿಗೆ ಜೋಡಣೆ ಮಾಡಲಾಗಿದೆ.
ಅದಕ್ಕೂ ಮೊದಲು ಸೋಮವಾರ ತಿಪಟೂರು ನಗರದ ಹಾಸನ ವೃತ್ತದಿಂದ ಹಳೆಪಾಳ್ಯದ ಸ್ವಗೃಹದವರೆಗೂ ಸರ್ಕಾರಿ ಗೌರವಗಳೊಂದಿಗೆ ಮತ್ತು ವಿವಿಧ ಶಾಲಾ ಮತ್ತು ಸಂಘ-ಸಂಸ್ಥೆಗಳಿಂದ ಗೌರವ ಸಮರ್ಪಣೆಯೊಂದಿಗೆ ಮೆರವಣಿಗೆಯ ಮೂಲಕ ಮೃತದೇಹವನ್ನು ಸಾಗಿಸಲಾಯಿತು. ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡು ಮೃತ ಚಂದನಳ ಆತ್ಮಕ್ಕೆ ಶಾಂತಿ ಕೋರಿದರು.