ಜನ ಜೀವಾಳ ಜಾಲ : ಬೆಳಗಾವಿ: ವಿಶ್ವಗುರು ಬಸವಣ್ಣನವರು ಯುಗದ ಪ್ರವರ್ತಕರಾಗಿ ಸಮಾಜವನ್ನು ಕಟ್ಟಿ ಬೆಳೆಸಿದವರು. ಅವರ ಸಂದೇಶ ಇಂದಿನ ಮನ್ವಂತರಕ್ಕೆ ಅಗತ್ಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ರತ್ನಪ್ರಭಾ ಬೆಲ್ಲದ ಅವರು ಹೇಳಿದರು.
ಅವರು ಕೆಎಲ್ಇ ಸಂಸ್ಥೆಯ ಜಿ. ಎ. ಸಂಯುಕ್ತ ಪದವಿಪೂರ್ವ ಕಾಲೇಜನಲ್ಲಿ ಜರುಗಿದ ಜಗಜ್ಯೋತಿ ಬಸವೇಶ್ವರ ಜಯಂತಿ ಉತ್ಸವ ಸಮಿತಿ ಹಾಗೂ ಬೆಳಗಾವಿ ಜಿಲ್ಲಾ ಘಟಕ ಮಹಾಸಭೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯನ್ನು ದಿನಾಂಕ ೨೭.೪.೨೦೨೪ ರಂದು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ಸಾಮಾಜಿಕ ಧಾರ್ಮಿಕ ಕ್ರಾಂತಿಯ ಹರಿಕಾರರಾಗಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ವರ್ಗ ಲಿಂಗ ತಾರತಮ್ಯತೆಗಳನ್ನು ಹೋಗಲಾಡಿಸಿದರು. ಸಮಾನತೆಯ ಸಮಾಜವನ್ನು ಕಟ್ಟಲು ಶರಣರು ಮಾಡಿದ ಕ್ರಾಂತಿ ಇಂದಿಗೂ ಪ್ರಸ್ತುತವೆನಿಸಿದೆ. ನಮ್ಮಲ್ಲಿ ಇಂದಿಗೂ ಸಾಮಾಜಿಕ ಜಾಢ್ಯತೆಯು ಜೀವಂತವಾಗಿ ಉಳಿದುಬಂದಿದೆ. ರಾಜಕಾರಣ ಅವೆಲ್ಲವೂಗಳನ್ನು ಪೋಷಿಸಿಕೊಂಡು ಬರುತ್ತಿರುವುದು ದುರಂತದ ಸಂಗತಿ. ಮಕ್ಕಳಲ್ಲಿ ಶರಣರ ವಿಚಾರಗಳನ್ನು ಬಿತ್ತುವ ಹಾಗೂ ವಚನ ಸಂಸ್ಕೃತಿಯನ್ನು ಮೂಡಿಸುವಗೋಸ್ಕರ ಮಹಾಸಭೆ ಹಾಗೂ ಬಸವ ಜಯಂತಿ ಉತ್ಸವ ಸಮಿತಿ ಪ್ರತಿವರ್ಷ ಪ್ರಬಂಧ ಸ್ಪರ್ಧೆಗಳನ್ನು ಪ್ರಾಥಮಿಕ ಮಾಧ್ಯಮಿಕ ಪದವಿಪೂರ್ವ ಕಾಲೇಜು ಹಾಗೂ ಎಲ್ಲಾ ವಯೋಮಾನದವರಿಗೆ ಆಯೋಜಿಸುವ ಮೂಲಕ ಜಾಗೃತಿ ಉಂಟು ಮಾಡುತ್ತಿದೆ. ಬಸವಣ್ಣನವರ ಜೀವನ ಸಂದೇಶವನ್ನು ಅರಿತು ವಿದ್ಯಾರ್ಥಿಗಳು ಶರಣ ಪರಂಪರೆಯನ್ನು ಮುಂದುವರಿಸಬೇಕೆAದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಘಟಕ ಮಹಾಸಭೆಯ ಉಪಾಧ್ಯಕ್ಷೆ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡುತ್ತ, ಬಸವಣ್ಣವರು ಹಾಗೂ ಇತರ ಶರಣರ ಜೀವನ ಸಂದೇಶವನ್ನು ಮಕ್ಕಳು ಅರಿಯಲೆಂಬ ಸದ್ದುದ್ದೇಶದಿಂದ ಪ್ರಬಂಧ ಸ್ಪರ್ಧೆಗಳನ್ನು ನೃತ್ಯ-ರೂಪಕ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಸ್ಪರ್ಧಾ ವಿಜೇತರಿಗೆ ಬರುವ ಮೇ ೮ರಂದು ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ಪ್ರಬಂಧ ಸ್ಪರ್ಧೆಯ ರೂಪರೇಷೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರಾದ ಗುರುದೇವ್ ಪಾಟೀಲ, ಬಾಲಚಂದ್ರ ಬಾಗಿ, ಪ್ರಸಾದ್ ಹಿರೇಮಠ, ವೀಣಾ ನಾಗಮೋತಿ, ರಕ್ಷಾ ದೇಗಿನಾಳ, ವೀರೇಶ ಅಪ್ಪಯ್ಯನವರಮಠ. ರಾಜೇಂದ್ರ ಶೀಲವಂತ, ಸಂಜಯ ಪಾವಟೆ, ಕಿರಣ್ ಅಗಡಿ, ಡಾ. ಮಹೇಶ್ ಗುರನಗೌಡರ, ಜಿಎ ಸಂಯುಕ್ತಪದವಿಪೂರ್ವ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. ವಿವಿಧ ಶಾಲಾ ಕಾಲೇಜುಗಳಿಂದ ೭೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.