ಬೆಂಗಳೂರು: ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರವನ್ನು ಮಂಗಳವಾರ ಬೆಳಗ್ಗೆಯಿಂದ ಆರಂಭಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಪರಿಣಾಮ ರಾಜ್ಯಾದ್ಯಂತ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ ಬಸ್ ಸೇವೆ ವ್ಯತ್ಯಯವಾಗಿದ್ದು, ಹಲವಾರು ಪ್ರಯಾಣಿಕರು ಪರದಾಡುವಂತಾಗಿದೆ. ಮುಷ್ಕರವನ್ನು ಒಂದು ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ರಾಜ್ಯದಲ್ಲಿ ಬಹುತೇಕ ಕಡೆ ಬಸ್ಗಳು ರಸ್ತೆಗೆ ಇಳಿದಿಲ್ಲ.
ಜನರಿಗೆ ಪರ್ಯಾಯ ವ್ಯವಸ್ಥೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಗೆ ಸಾರಿಗೆ ನಿಗಮಗಳು ಮುಂದಾಗಿವೆ. ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಹಲವೆಡೆ ಬಸ್ಗಳು ಸಂಚರಿಸುತ್ತಿವೆ. ಏರ್ಪೋರ್ಟ್ ಪ್ರಯಾಣಿಕರಿಗೆ ಅಂತಹ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.
ಸಾರ್ವನಿಕರಿಗೆ ತೊಂದರೆ ತಪ್ಪಿಸಲು ಸಾರಿಗೆ ಇಲಾಖೆ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ಗೆ ಸೂಚನೆ ನೀಡಿದ್ದು, ಖಾಸಗಿ ಶಾಲಾ ವ್ಯಾನ್ಗಳಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಅವಕಾಶ ನೀಡಿದೆ. ಹೆಚ್ಚುವರಿ ಟ್ರಿಪ್ ಮೆಟ್ರೋ ರೈಲುಗಳನ್ನು ನಿಯೋಜಿಸಲು ಸಹ ಸೂಚನೆ ನೀಡಿದೆ. ರೈಲ್ವೆ ಇಲಾಖೆಯು ಒಳ ಜಿಲ್ಲೆ ರೈಲುಗಳ ಸಂಚಾರ ಹೆಚ್ಚಿಸಬೇಕು ಎಂದು ಸೂಚಿಸಲಾಗದೆ.
ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ಟ್ರಿಕ್ ಬಸ್ಗಳು ಸೇವೆ ನೀಡುತ್ತಿವೆ. ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ನಿಕ್ ಬಸ್ಗಳು ಸಂಚರಿಸುತ್ತಿವೆ. ಆ ಬಸ್ ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ. ಆ ಚಾಲಕರು ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಎಲೆಕ್ಟ್ರಿಕ್ ಬಸ್ಗಳು ಮುಷ್ಕರದ ಸಂದರ್ಭದಲ್ಲಿ ಸೇವೆ ನೀಡಲಿವೆ.
ಇದು ಬೆಂಗಳೂರು ಮಟ್ಟಿಗೆ ಸ್ವಲ್ಪಮಟ್ಟಿಗೆ ಜನರಿಗೆ ಅನುಕೂಲ ಒದಗಿಸಬಹುದಾದರೂ ರಾಜ್ಯದ ಇತರೆಡೆ ಎಲೆಕ್ಟ್ರಿಕ್ ಬಸ್ಗಳು ಹೆಚ್ಚಿಗೆ ಇಲ್ಲದ ಕಾರಣ ಸರ್ಕಾರ ಬೇರೆ ವ್ಯವಸ್ಥೆಗೆ ಮುಂದಾಗಿದೆ. ಬೆಂಗಳೂರು ಒಂದರಲ್ಲೇ ಸುಮಾರು 4 ಸಾವಿರ ಖಾಸಗಿ ಬಸ್ಗಳನ್ನ ನೀಡುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಸಾರಿಗೆ ಆಯುಕ್ತರು ಕೇಳಿಕೊಂಡಿದ್ದಾರೆ. ರಾಜ್ಯಾದ್ಯಂತ 11 ಸಾವಿರ ಬಸ್ ಕೇಳಿದ್ದಾರೆ ಎಂದು ಹೇಳಲಾಗಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸಿದೆ. ಸಾರಿಗೆ ಸೇವೆ ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಕಾರಣದಿಂದಾಗಿ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಎಸ್ಮಾ ಜಾರಿಗೊಳಿಸಲಾಗಿದೆ. ಅದರ ಜತೆ ರಜೆಯಲ್ಲಿರುವ ನೌಕರರಿಗೆ ರಜೆ ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ. ಎಲ್ಲ ಘಟಕಗಳಲ್ಲೂ ನೌಕರರಿಗೆ ಆಯಾ ಘಟಕ ವ್ಯವಸ್ಥಾಪಕರ ಮೂಲಕ ಹೈಕೋರ್ಟ್ ಆದೇಶ ಮತ್ತು ಎಸ್ಮಾ ಜಾರಿಯಲ್ಲಿರುವ ಕಾರಣ ಯಾರೂ ಮುಷ್ಕರದಲ್ಲಿ ಭಾಗಿಯಾದಂತೆ ಸೂಚನೆಯನ್ನೂ ನೀಡಲಾಗಿದೆ. ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮತ್ತು ಕರ್ತವ್ಯ ಹಾಜರಾಗದವರಿಗೆ ವೇತನ ನೀಡದಿರಲೂ ಸಾರಿಗೆ ನಿಗಮಗಳು ನಿರ್ಧರಿಸಿವೆ.