ಬೆಂಗಳೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಚ್ಛಾಟಿತ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ ಅವರ ವಿರುದ್ಧ ಯಾವುದೇ ಅಶ್ಲೀಲ ಫೋಟೊ, ವೀಡಿಯೊ, ಸ್ಕ್ರೀನ್ ಶಾಟ್ ಅಥವಾ ಅಶ್ಲೀಲ ಆಡಿಯೊಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ ನ್ಯಾಯಾಲಯವು ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.
ಕೆ.ಇ. ಕಾಂತೇಶ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಈ ಆದೇಶ ಮಾಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“1ರಿಂದ 50ನೇ ಪ್ರತಿವಾದಿಗಳು, ಅವರ ಪ್ರತಿನಿಧಿಗಳು, ಸೇವಕರು, ಏಜೆಂಟರು, ಆಡಳಿತಗಾರರು, ಅವರು ನಿಯೋಜಿಸಿದವರು ಇತ್ಯಾದಿ ಯಾರೇ ಆದರೂ ದೂರಿನಲ್ಲಿ ಉಲ್ಲೇಖಿಸಿರುವಂತೆ ಯಾವುದೇ ತೆರನಾದ ಅಶ್ಲೀಲ ವೀಡಿಯೊ ಪ್ರಸಾರ/ಮದ್ರಣ/ಹಂಚಿಕೆ ಮಾಡದಂತೆ ಪ್ರತಿವಾದಿಗಳ ವಿರುದ್ಧ ಮಧ್ಯಂತರ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. , ಪ್ರತಿವಾದಿ ಮಾಧ್ಯಮಗಳಿಗೆ ನೋಟಿಸ್, ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದೆ.
ವರದಿ ಪ್ರಕಾರ, ಲೋಕಸಭೆ ಚುನಾವಣೆ ವೇಳೆ ತಮ್ಮ ಹೆಸರಿಗೆ ಮಸಿ ಬಳಿಯುವ ಯತ್ನ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಮಾಧ್ಯಮಗಳಲ್ಲಿ ಮಾನಹಾನಿಕರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಫಿರ್ಯಾದಿದಾರ ಕಾಂತೇಶ ಅವರು ತಮ್ಮ ವಕೀಲರಾದ ಎಂ. ವಿನೋದಕುಮಾರ ಮೂಲಕ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ಹೊರಡಿಸಿದೆ.