ಬೆಳಗಾವಿ: ಏರೋಸ್ಪೇಸ್ ಪಾರ್ಕ್ ಯೋಜನೆಯನ್ನು ಉತ್ತರ ಕರ್ನಾಟಕದ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಯೋಜನೆಗಾಗಿ ಮೀಸಲಿಟ್ಟಿದ್ದ ದೇವನಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 1,777 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಳೀಯ ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳುವ ತೀರ್ಮಾನ ಕೈಕೊಂಡಿರುತ್ತೀರಿ. ಬಹು ಮುಖ್ಯವಾಗಿ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಈಗಾಗಲೇ ವಿಪರೀತ ಜನಸಂದಣಿಯನ್ನು ಹೊಂದಿದ್ದು, ಅಲ್ಲಿನ ರೈತರು ಕೈಗಾರಿಕೆ, ರಸ್ತೆ, ರೈಲ್ವೆ, ವಿಮಾನ ನಿಲ್ದಾಣ ಹಾಗೂ ಜನವಸತಿ ಇತ್ಯಾದಿ ಯೋಜನೆಗಳಿಗೆ ಜಮೀನು ಕಳೆದುಕೊಂಡಿರುತ್ತಾರೆ. ಇದರಿಂದ ಕರ್ನಾಟಕ ಸರ್ಕಾರವು ಬೆಂಗಳೂರಿನ ಸುತ್ತಮುತ್ತಲಿನ ರೈತರ ಕೂಗಿಗೆ ಸ್ಪಂದಿಸಿದೆ. ಆದರೆ ಅದೇ ಸಮಯದಲ್ಲಿ ಇಂತಹ ಮಹತ್ವದ ಕೈಗಾರಿಕಾ ಅವಕಾಶಗಳನ್ನು ಪಕ್ಕದ ರಾಜ್ಯಗಳು ತಮ್ಮ ರಾಜ್ಯಗಳತ್ತ ಸೆಳೆಯುವ ಕಸರತ್ತು ಆರಂಭಿಸಿರುವುದು ಕಂಡುಬರುತ್ತದೆ. ಆದ ಕಾರಣ ನಮ್ಮ ರಾಜ್ಯಕ್ಕೆ ಬಂದಿರುವ ಯೋಜನೆಯನ್ನು ಬೇರೆ ಕಡೆಗೆ ಸ್ಥಳಾಂತರವಾಗಲು ಬಿಡದೆ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಸ್ವೀಕಾರಾರ್ಹ ಮತ್ತು ಸೂಕ್ತವಾದ ಪ್ರದೇಶಕ್ಕೆ ಸ್ಥಾಪನೆ ಆಗುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಅಭಿವೃದ್ದಿ ಪರವಾದ ಒಂದು ಗುರುತರ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.
ಬೆಳಗಾವಿಯು ಕರ್ನಾಟಕದ ಎರಡನೆಯ ರಾಜಧಾನಿಯಾಗಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿ ವರ್ಷ ವಿಧಾನ ಮಂಡಲದ ಅಧಿವೇಶನ ನಡೆಯುತ್ತದೆ. ಅದೂ ಅಲ್ಲದೆ ಬೆಳಗಾವಿಯು ಉತ್ತರ ಕರ್ನಾಟಕದ ಕೇಂದ್ರಸ್ಥಾನವಾಗಿದ್ದು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಭಾಗದಲ್ಲಿ ಇರುತ್ತದೆ. ಜೊತೆಗೆ ಬೆಳಗಾವಿಯು ಭಾರತೀಯ ವಾಯುಸೇನೆ ಹಾಗು ಭೂಸೇನೆಯ ಪ್ರಮುಖ ಕೇಂದ್ರವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಮುಖ್ಯವಾಗಿ ವಿಮಾನದ ಉಪಕರಣಗಳ ತಯಾರಕ ಖಾಸಗಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ದೇಶದ ಪ್ರತಿಷ್ಠೆಯ ಹಾಗು ಅತೀ ಸೂಕ್ಷ್ಮ ಯಶಸ್ವಿ ಯೋಜನೆಯಾದ ಮಂಗಳಯಾನದಂತಹ ಮಹತ್ತರ ಯೋಜನೆಗಳಿಗೆ ಬೆಳಗಾವಿಯಿಂದಲೇ ಹಲವಾರು ಉಪಕರಣಗಳು ಸರಬರಾಜು ಆಗಿರುತ್ತವೆ.ಈ ಪ್ರದೇಶವು ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ನೆಲೆಯಾಗಿದೆ, ಭೂಮಿಯ ಲಭ್ಯತೆ ಮತ್ತು ಅಸ್ತಿತ್ವದಲ್ಲಿರುವ ಮೂಲ ಸೌಕರ್ಯದ ಬೆಂಬಲ ಸೇರಿದಂತೆ ಹಲವಾರು ಅನುಕೂಲಗಳನ್ನು ನೀಡುತ್ತದೆ.
ಬಹು ಮುಖ್ಯವಾಗಿ, ಅಭಿವೃದ್ದಿಯು ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಉತ್ತರ ಕರ್ನಾಟಕಕ್ಕೆ ಈ ತರಹದ ದೊಡ್ಡ ಯೋಜನೆಗಳು ಬರುವುದರಿಂದ ಬೆಂಗಳೂರಿನಂತಹ ನಗರಗಳಲ್ಲಿ ವಾಸವಾಗಿರುವ ಜನರು ಉತ್ತರ ಕರ್ನಾಟಕದ ಭಾಗಗಳಿಗೆ ಬಂದು ನೆಲೆಸಬಹುದಾಗಿರುತ್ತದೆ. ಇದರಿಂದ ಬೆಂಗಳೂರಿನಲ್ಲಿರುವ ಜನಸಂದಣಿ ಒತ್ತಡ ಕಡಿಮೆಯಾಗುವುದಲ್ಲದೆ, ಉತ್ತರ ಕರ್ನಾಟಕದ ಭಾಗವು ಅಭಿವೃದ್ದಿಯಾಗುತ್ತದೆ. ಅದೂ ಅಲ್ಲದೆ ಡಾ:ಡಿ.ಎಂ ನಂಜುಡಪ್ಪ ವರದಿಯನ್ವಯ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಹಿಂದುಳಿದಿರುವುದಾಗಿ ಈ ಹಿಂದೆ ವರದಿ ಸಲ್ಲಿಸಿರುವುದನ್ನು ಗಮನಿಸುತ್ತಾ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ವಿನಿಯೋಗಿಸುತ್ತಿದೆ. ಪ್ರಸ್ತುತ ಏರೋಸ್ಪೇಸ್ ಪಾರ್ಕ್ ಯೋಜನೆಯನ್ನು ಸ್ಥಳಾಂತರಿಸುವುದರಿಂದ ಈ ಯೋಜನೆಯ ಮಹತ್ವದ ಹೂಡಿಕೆಯನ್ನು ಕರ್ನಾಟಕದಲ್ಲೇ ಮುಂದುವರಿಸುವ ಅವಕಾಶ ಸಿಗುವುದಲ್ಲದೆ, ಈ ಪ್ರದೇಶಕ್ಕೆ ಹೆಚ್ಚು ಅಗತ್ಯವಿರುವ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗವನ್ನು ತರಲು ಅನುಕೂಲವಾಗುತ್ತದೆ. ದಯವಿಟ್ಟು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರಿನ ಸಮೀಪ ದೇವನಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಏರೋಸ್ಪೇಸ್ ಪಾರ್ಕ್ ಯೋಜನೆಯನ್ನು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸ್ಥಳಾಂತರಿಸುವ ಮೂಲಕ ಪಕ್ಕದ ರಾಜ್ಯಗಳಿಗೆ ಈ ಯೋಜನೆ ಹೋಗದಂತೆ ತಡೆಹಿಡಿಯಲು ಅಗತ್ಯ ಕ್ರಮಕೈಗೊಳ್ಳಬೇಕಾಗಿ ಅವರು ವಿನಂತಿಸಿದ್ದಾರೆ.