ನವದೆಹಲಿ: ದೇಶದ ಎಲ್ಲ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಏಕೈಕ ಮಾರ್ಗವೆಂದರೆ, ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಮುಸ್ಲಿಂ ವೈಯಕ್ತಿಕ ಕಾನೂನು (ಷರೀಯತ್) ಅಡಿಯಲ್ಲಿ ಉತ್ತರಾಧಿಕಾರದ ನಿಬಂಧನೆಗಳನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮುಸ್ಲಿಂ ಸಮುದಾಯದ ಒಂದು ದೊಡ್ಡ ಭಾಗವು ಪಿತ್ರಾರ್ಜಿತ ಹಕ್ಕುಗಳಿಂದ ವಂಚಿತವಾಗಿದೆ ಎಂಬುದು ನಿಜ. ಆದರೆ, ಷರೀಯತ್ನ ಉತ್ತರಾಧಿಕಾರದ ನಿಬಂಧನೆಯನ್ನು ರದ್ದುಗೊಳಿಸಿದರೆ, ಯಾವ ಕಾನೂನು ಉತ್ತರಾಧಿಕಾರವನ್ನು ನಿಯಂತ್ರಿಸಬೇಕು? ಈ ಪ್ರಶ್ನೆಗೆ ನಿಖರವಾದ ಉತ್ತರ… ಯುಸಿಸಿ’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಹಾಗೂ ಜಾಯ್ಮಾಲ್ಯಾ ಬಾಗ್ಚಿ ಅವರಿದ್ದ ನ್ಯಾಯಪೀಠ ಹೇಳಿದೆ.
ಮುಸ್ಲಿಂ ಮಹಿಳೆಯರಿಗೆ ಸಮಾನ ಉತ್ತರಾಧಿಕಾರದ ಹಕ್ಕು ನೀಡುವಂತೆ ಕೋರಿ ಪೌಲೋಮಿ ಪವಿನಿ ಶುಕ್ಲಾ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ಪರಿಗಣಿಸಿತು.
ಬುಡಕಟ್ಟು ಜನಾಂಗಗಳು ಸೇರಿದಂತೆ ವಿವಿಧ ಸಮುದಾಯಗಳಲ್ಲಿ ಅನೇಕ ಅಸಮಾನತೆಗಳಿವೆ ಎಂಬುದನ್ನು ಗಮನಿಸಿದ ಪೀಠವು, ಇವುಗಳನ್ನು ನ್ಯಾಯಾಲಯವು ತಳ್ಳಿಹಾಕಬಹುದೇ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಒಬ್ಬ ಪುರುಷ– ಒಬ್ಬ ಮಹಿಳೆ, ಅಂದರೆ ಏಕಪತ್ನಿತ್ವದ ವಿವಾಹವು ಸಮಾನತೆಯ ಗುರಿ ಸಾಧಿಸಿದೆಯೇ ಎಂದು ಕೇಳಿತು.
‘ದೇಶದ ಎಲ್ಲ ಬಹುಪತ್ನಿತ್ವ ವಿವಾಹಗಳನ್ನು ಈ ನ್ಯಾಯಾಲಯವು ರದ್ದುಗೊಳಿಸಬಹುದೇ’ ಎಂದೂ ನ್ಯಾಯಪೀಠ ಪ್ರಶ್ನಿಸಿತು.
‘ಷರೀಯತ್, ಮಹಿಳೆಯರಿಗೆ ಪುರುಷರ ಅರ್ಧದಷ್ಟು ಹಕ್ಕನ್ನಷ್ಟೇ ಕೊಟ್ಟಿದೆ’ ಎಂದು ಅರ್ಜಿದಾರರ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಪೀಠಕ್ಕೆ ತಿಳಿಸಿದರು.
‘ತ್ರಿವಳಿ ತಲಾಖ್ ಕೂಡ ಷರೀಯತ್ನ ಭಾಗವಾಗಿದೆ. ಆದರೆ, ಶಾಯರಾ ಬಾನೊ (ತ್ರಿವಳಿ ತಲಾಖ್) ಪ್ರಕರಣದಲ್ಲಿ ಈ ನ್ಯಾಯಾಲಯವು, ‘ಇದೊಂದು (ತ್ರಿವಳಿ ತಲಾಖ್) ಸ್ವೇಚ್ಛಾಚಾರ. ಅಲ್ಲದೆ, ಸಾರ್ವಜನಿಕ ನೀತಿಯ ವಿರುದ್ಧವಾಗಿದ್ದು, ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ’ ಎಂಬ ಅಭಿಪ್ರಾಯದೊಂದಿಗೆ ಅದನ್ನು ರದ್ದುಗೊಳಿಸಿದೆ’ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
‘ಯಾವುದೇ ಶಾಸನಬದ್ಧ ಕಾನೂನು ಪಾಲಿಸದೆ, ಮುಸ್ಲಿಂ ಪುರುಷರು ಏಕಪಕ್ಷೀಯವಾಗಿ ವಿಚ್ಚೇದನ ಪಡೆಯುತ್ತಾರೆ. ಆದ್ದರಿಂದ ನಾವು ಷರೀಯತ್ನಡಿ ಹೊಂದಿದ ಬಹುಪತ್ನಿತ್ವವನ್ನು ಅಮಾನ್ಯವೆಂದು ಘೋಷಿಸಬಹುದೇ?, ಇಲ್ಲ. ಆದ್ದರಿಂದ ಶಾಸಕಾಂಗವು ಈ ನಿಟ್ಟಿನಲ್ಲಿ ಸೂಕ್ತ ಕಾನೂನು ಜಾರಿಗೊಳಿಸಬೇಕು’ ಎಂದು ಪೀಠ ಹೇಳಿತು.
ಮುಸ್ಲಿಂ ಮಹಿಳೆಯರೇ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದು ಸೂಕ್ತ ಎಂದೂ ನ್ಯಾಯಾಲಯ ಹೇಳಿತು.
‘ಇದು ಸಮಾನತೆಯ ಪ್ರಶ್ನೆಯಾಗಿದೆ’ ಎಂದು ನ್ಯಾಯಪೀಠದ ಗಮನಕ್ಕೆ ತಂದ ಪ್ರಶಾಂತ್ ಭೂಷಣ್, ಅರ್ಜಿದಾರರಲ್ಲಿ ಕೆಲವರು ಮುಸ್ಲಿಂ ಮಹಿಳೆಯರು ಎಂದು ಹೇಳಿದರು.
ಷರೀಯತ್ನ ಉತ್ತರಾಧಿಕಾರದ ನಿಬಂಧನೆಗಳನ್ನು ರದ್ದುಗೊಳಿಸಿದಲ್ಲಿ, ಪರಿಹಾರೋಪಾಯಗಳನ್ನು ಸೇರಿಸಲು ಅರ್ಜಿಯ ತಿದ್ದುಪಡಿ ಮಾಡುವಂತೆ ಪೀಠ ಸೂಚಿಸಿತು.
ಶಾಸಕಾಂಗದ ವಿವೇಚನೆಗೆ ಯುಸಿಸಿ
ಷರೀಯತ್ ಅನೂರ್ಜಿತ ಎಂದು ಘೋಷಿಸುವ ಮತ್ತು ಕಾನೂನಿನ ನಿರ್ವಾತವನ್ನು ಸೃಷ್ಟಿಸುವ ಬದಲು, ಅದನ್ನು ಶಾಸಕಾಂಗದ ವಿವೇಚನೆಗೆ ಉಲ್ಲೇಖಿಸುವುದು ಉತ್ತಮ. ಇದರಿಂದ ಶಾಸಕಾಂಗವು ಏಕರೂಪ ನಾಗರಿಕ ಸಂಹಿತೆಯ ಮೇಲೆ ಕಾನೂನು ಜಾರಿಗೊಳಿಸಲಿದೆ. ಈ ಹಿಂದೆಯೂ ನ್ಯಾಯಾಲಯವು ಏಕರೂಪ ನಾಗರಿಕ ಸಂಹಿತೆಯನ್ನು ಶಿಫಾರಸು ಮಾಡಿತ್ತು
–ಸುಪ್ರೀಂ ಕೋರ್ಟ್ ನ್ಯಾಯಪೀಠ


