ಬೆಳಗಾವಿ :
ಜ್ಞಾನ ನಮ್ಮೊಳಗೆ ಇದೆ. ಅದನ್ನು ಸಿದ್ಧಿಸಿಕೊಳ್ಳಲು ನಾವು ಸಿದ್ಧತೆ ನಡೆಸಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸಂಪೂರ್ಣವಾಗಿ ಕಲಿಯಲು ಸಮರ್ಪಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವೆ ಕೆ. ಟಿ. ಶಾಂತಲಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2022-23 ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್. ಎಸ್. ಎಸ್. ರೆಡ್ ಕ್ರಾಸ್, ಮಹಿಳಾ ಸಬಲೀಕರಣ ಕಾರ್ಯಚಟುವಟಿಕೆಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಮಹಾವಿದ್ಯಾಲಯದ ಆವರಣದಲ್ಲಿ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಈ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬಂದವರು. ವಿದ್ಯಾರ್ಥಿಗಳಿಗೆ ಉತ್ತಮವಾದ ಕಲಿಕಾ ವಾತಾವರಣವಿದೆ. ವಿದ್ಯಾರ್ಥಿಗಳು ಕೇವಲ ಜ್ಞಾನವೊಂದನ್ನೇ ಮಹಾವಿದ್ಯಾಲಯದಿಂದ ತೆಗೆದುಕೊಂಡು ಹೋಗದೇ ಮಾನವೀಯ ಮೌಲ್ಯಗಳು, ಸಾಮಾಜಿಕ ಸೇವೆ, ಕಲೆ, ಸಾಹಿತ್ಯ, ಉತ್ತಮ ಬದುಕಿನ ವಿಧಾನಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಹೊಸ ಶಿಕ್ಷಣ ನೀತಿಯು ಅನೇಕ ಜ್ಞಾನ ಶಿಸ್ತುಗಳ ಅಭ್ಯಾಸಕ್ಕೆ ಭೂಮಿಕೆಯನ್ನು ಒದಗಿಸುತ್ತಿದೆ. ಅದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ಭವ್ಯವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ರಾಚವಿ ಹಣಕಾಸು ಅಧಿಕಾರಿ ಪ್ರೊ. ಎಸ್. ಬಿ. ಆಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಬಹುದೊಡ್ಡ ಆಸ್ತಿ. ಆ ಸಮಯದಲ್ಲಿ ಜ್ಞಾನ ಸಂಪಾದನೆ ಪ್ರಾಧಾನ್ಯತೆ ನೀಡಬೇಕು. ಜ್ಞಾನಕ್ಕಾಗಿ ಜೀವ ತವಕಿಸುತ್ತಿದ್ದರೆ, ತಿಳಿಯ ಬೇಕೆಂಬ ಹಂಬಲ ತೀವ್ರವಾಗಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಇಂದಿನ ಉದ್ಯೋಗದ ಮಾರುಕಟ್ಟೆಯಲ್ಲಿ ಕೌಶಲ್ಯಭರಿತವರಿಗೆ ಬೇಡಿಕೆಯಿದೆ. ವಿದ್ಯಾರ್ಥಿಗಳು ಜ್ಞಾನದೊಂದಿಗೆ ಕೌಶಲ್ಯ ಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಶಂಕರ ತೇರದಾಳ ಅವರು, ನಮ್ಮ ಮಹಾವಿದ್ಯಾಲಯವು ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮವಾದ ವಿದ್ಯಾರ್ಥಿ ಜೀವನ ಹೊಂದಬೇಕು ಎಂದರು.
ರೆಡ್ ಕ್ರಾಸ್ ಅಧಿಕಾರಿಯಾದ ಡಾ. ಬಾಲಾಜಿ ಆಳಂದೆ ಮತ್ತು ಡಾ. ಸುಮನ್ ಮುದ್ದಾಪುರ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಯೋಜಕ ಡಾ. ಅರ್ಜುನ ಜಂಬಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ. ಹನುಮಂತಪ್ಪ ಸಂಜೀವಣ್ಣನವರ ಸ್ವಾಗತಿಸಿದರು. ಕ್ರೀಡಾ ವಿಭಾಗದ ನಿರ್ದೇಶಕ ಡಾ. ಜಗದೀಶ ಗಸ್ತಿ ವಂದಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯಕ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ದೀಪಕ ಪಾಟೀಲ್ ಮತ್ತು ಪ್ರೀತಿ ಹಂದಿಗುಂದ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.