ಬೆಳಗಾವಿ: ಉದ್ಯಮಿ ಹಾಗೂ ಗುತ್ತಿಗೆದಾರ ಸಂತೋಷ ಪದ್ಮಣ್ಣವರ(47) ಸಾವಿನ ಸುದ್ದಿಗೆ ಸಂಬಂಧಿಸಿದ ಸಂಗತಿಗಳು ಮತ್ತಷ್ಟು ಬೆಳಕಿಗೆ ಬರುತ್ತಿವೆ. ಮುಖ್ಯ ಆರೋಪಿ ಉಮಾ ಉರ್ಫ್ ಸರಿತಾ(41) ಅವರ ಫೇಸ್ಬುಕ್ ಸ್ನೇಹಿತ ಕೊಡಗು ಜಿಲ್ಲೆ ಶನಿವಾರ ಸಂತೆ ಗ್ರಾಮದ ಶೋಭಿತ್ ಗೌಡ (30) ಮತ್ತು ಪವನ್ (27) ಬಂಧಿತರಾಗಿದ್ದಾರೆ.
ಗಂಡನ ಇನ್ನಿಲ್ಲದ ಕಿರುಕುಳಕ್ಕೆ ಬೇಸತ್ತು ರೋಸಿ ಹೋದ ಸರಿತಾ ಕೊಡಗಿನ ಕಟ್ಟುಮಸ್ತಾದ, ಇನ್ನೂ ಯುವಕರಾಗಿರುವ ಈ ತರುಣರ ಸ್ನೇಹದ ಬಲೆಗೆ ಬಿದ್ದಳೇ ಎಂಬ ಚರ್ಚೆ ಇದೀಗ ಹರಿದಾಡುತ್ತಿದೆ.
ಕೊಲೆಗೆ ಸಂಬಂಧಿಸಿದಂತೆ
ಮನೆ ಕೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಅವರ ಕೈವಾಡದ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂಬ ಮಾಹಿತಿ ಲಭಿಸಿದೆ. ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರದಂದು ಪೊಲೀಸರು ಈ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ವಾರದ ಹಿಂದೆ ಸಂತೋಷ ಪದ್ಮಣ್ಣವರ ಭೀಕರವಾಗಿ ಕೊಲೆಯಾಗಿದ್ದರು. ಆದರೆ ಅದನ್ನು ಸಹಜ ಸಾವು ಎಂದು ಎಲ್ಲರೂ ನಂಬಿದ್ದರು. ಸಹಜವಾಗಿಯೇ ಅಂತ್ಯಕ್ರಿಯೆ ನಡೆದಿತ್ತು. ಆದರೆ ವಾರದ ನಂತರ ಸ್ವತಃ ಮಗಳೇ ತಾಯಿಯ ಮೇಲೆ ಅನುಮಾನ ಪಟ್ಟು ಪೊಲೀಸರಿಗೆ ದೂರು ನೀಡಿದ ನಂತರ ಸಂತೋಷ ಪದ್ಮಣ್ಣವರ ಕೊಲೆಯ ಒಂದೊಂದೇ ಸಂಗತಿಗಳು ಈಗ ಬಯಲಾಗ ತೊಡಗಿದೆ.
ರಾಗಿ ಅಂಬಲಿಗೆ ಮದ್ದು ಬೆರೆಸಿದಳೆ ?:
ಸಂತೋಷ ಪದ್ಮಣ್ಣವರ ಪತ್ನಿ ಸರಿತಾ ತನ್ನ ಗಂಡನನ್ನು ಕೊಲ್ಲಲು ಮಾಡಿದ ಖತರ್ನಾಕ್ ಉಪಾಯ ಈಗ ಬಹಿರಂಗವಾಗಿದೆ. ಈ ಮೊದಲು ನಿದ್ರೆ ಮಾತ್ರೆ ನೀಡಿ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎನ್ನಲಾಗಿತ್ತು. ಆದರೆ, ಈಗ ಮತ್ತೊಂದು ಮಹತ್ವದ ಸಂಗತಿ ಬಯಲಾಗಿದೆ. ಸಂತೋಷ ಪದ್ಮಣ್ಣವರ ಅವರಿಗೆ ಕುಡಿಯಲು ಕೊಟ್ಟ ರಾಗಿ ಅಂಬಲಿಗೆ ನಿದ್ರೆ ಮಾತ್ರೆ ಬೆರೆಸಿ ನೀಡಲಾಗಿದೆ. ಇದರಿಂದ ನಿದ್ದೆಗೆ ಜಾರಿದಾಗ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಆದರೆ, ಇನ್ನೂ ಉಸಿರು ಇದ್ದ ಕಾರಣ ಫೇಸ್ಬುಕ್ ಗೆಳೆಯ ಶನಿವಾರ ಸಂತೆಯ ಶೋಭಿತ್ ಗೌಡ ಹಾಗೂ ಆತನ ಗೆಳೆಯ ಪವನ್ ನನ್ನು ಮನೆಗೆ ಕರೆಸಿ ಸಂತೋಷನ ಜೀವನಕ್ಕೆ ಇತಿಶ್ರೀ ಹಾಡಲಾಗಿದೆ ಎಂಬ ಮತ್ತೊಂದು ವಿಷಯ ಈಗ ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.