ಬೆಂಗಳೂರು: ಸರಿಯಾಗಿ ಪಳಗಿಸಿದರೆ ಕಾಡಿನ ದೈತ್ಯನಿಗೂ ಅಡುಗೆ ಕೆಲಸ ಹೇಳಿಕೊಡಬಹುದೆಂದು ಇಲ್ಲೊಬ್ಬ ಮಹಿಳೆ ತೋರಿಸಿದ್ದು, ಆನೆಯ ಕೈಯಲ್ಲಿ ಅಡುಗೆ ಮಾಡಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ.
ಮಹಿಳೆಯೊಬ್ಬಳು ಹೇಳಿದ ಹಾಗೆ ಅಡುಗೆ ಕೆಲಸ ಮಾಡುವ ಆನೆಯೊಂದರ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಡುಗೆ ಮಾಡುವಲ್ಲಿ ಆನೆಯ ಆಸಕ್ತಿಯನ್ನು ಕಂಡು ನೆಟ್ಟಿಗರು ಚಕಿತಗೊಂಡಿದ್ದಾರೆ.
ಈ ವಿಡಿಯೊವನ್ನು ದಿ ನೇಷನ್ ಥೈಲ್ಯಾಂಡ್ ಎಂಬ ಎಕ್ಸ್ ಪೇಜ್ ಹಂಚಿಕೊಂಡಿದ್ದು, ನಂತರ ಸಾವಿರಾರು ಜನರು ಇದನ್ನು ರಿಶೇರ್ ಮಾಡಿದ್ದಾರೆ.
‘ಅಡುಗೆ ಮಾಡುವುದಕ್ಕೆ ಆನೆಯು ಮಹಿಳೆಗೆ ಸಹಾಯ ಮಾಡುತ್ತಿದೆ. ಈ ಆನೆ ಮುಂದಿನ ಟಾಪ್ ಶೆಫ್ ಆಗಬಹುದೇ?’ ಎಂದು ಕೇಳಿದೆ.
ವಿಡಿಯೊದಲ್ಲಿರುವುದು ಗಂಡಾನೆಯಾಗಿದ್ದು, ಇದಕ್ಕೆ ‘ 5 ‘ (Play Daow Mongkol) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದೆ.
ಮಹಿಳೆ ಹೇಳಿದಂತೆ ಸೊಂಡಿಲಿನ ಸಹಾಯದಿಂದ ಬಾಣಲೆಯಲ್ಲಿರುವ ಪದಾರ್ಥವನ್ನು ಸೌಟಿನಿಂದ ತಿರುಗಿಸುವುದು, ಕುಟ್ಟಾಣಿ ಹಿಡಿದು ಕುಟ್ಟುವುದು ಹೀಗೆ ಹಲವು ಕೆಲಸಗಳನ್ನು ಆನೆ ಮಾಡುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.
ಈ ವಿಡಿಯೊವನ್ನು ಮಿಲಿಯನ್ಗಟ್ಟಲೆ ಜನರು ವೀಕ್ಷಿಸಿದ್ದು, ಸಾವಿರಾರು ಜನರು ಕಮೆಂಟುಗಳನ್ನು ಮಾಡಿದ್ದಾರೆ. ಆನೆಯನ್ನು ಪಳಗಿಸಿದ ರೀತಿ ಮತ್ತು ಅದರ ಆಸಕ್ತಿ ಬಗ್ಗೆ ಕೊಂಡಾಡಿದ್ದಾರೆ.
‘ಶೆಫ್ಗಳಿಗೆ ಮುಂದೆ ತೊಂದರೆ ಕಾದಿದೆ’ ಎಂದು ನೆಟ್ಟಿಗರೊಬ್ಬರು ಹಾಸ್ಯ ಮಾಡಿದರೆ, ಆನೆಯನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಇನ್ನೊಬ್ಬರು ಹೇಳಿದ್ದಾರೆ.