ನವದೆಹಲಿ: ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾದ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದೆ.
ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ. ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್ 7 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಎಂದು ನಿಗದಿಪಡಿಸಲಾಗಿದೆ.
ಈ ಹಿಂದೆ, ಚುನಾವಣಾ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ಭಾರತದ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ, ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ ವಹಿಸಲಾಗಿದೆ ಎಂದು ಹೇಳಿತ್ತು. ಸಂವಿಧಾನದ 66 (1) ನೇ ವಿಧಿಯ ಪ್ರಕಾರ, ಉಪರಾಷ್ಟ್ರಪತಿಯನ್ನು ರಾಜ್ಯಸಭೆಯ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರು ಹಾಗೂ ಲೋಕಸಭೆಯ ಚುನಾಯಿತ ಸದಸ್ಯರಿಂದ ಆಯ್ಕೆ ಮಾಡಲಾಗುತ್ತದೆ. ಈ ಸಲ ಉಪರಾಷ್ಟ್ರಪತಿ ಯಾರು ಆಗುತ್ತಾರೆ ಎಂಬ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಸೂಚಿಸುವ ಅಭ್ಯರ್ಥಿ ಮುಂದಿನ ರಾಷ್ಟ್ರಪತಿ ಆಗುವ ಎಲ್ಲಾ ಸಾಧ್ಯತೆಗಳು ಇವೆ.