ದೆಹಲಿ:
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಚುನಾವಣಾ ಆಯೋಗ 2 ಖಡ್ಗ ಮತ್ತು ಗುರಾಣಿ ಚಿಹ್ನೆಯನ್ನು ಮಂಗಳವಾರ ನೀಡಿದೆ.
ಸೋಮವಾರ ಶಿಂಧೆ ಬಣಕ್ಕೆ ಬಾಳಾಸಾಹೇಬ್ ಶಿವಸೇನಾ ಹೆಸರನ್ನು ನೀಡಿತ್ತು. ಅರಳಿಮರ, ಖಡ್ಗಗಳು- ಗುರಾಣಿ ಹಾಗೂ ಸೂರ್ಯ ಚಿಹ್ನೆಗಳನ್ನು ಶಿಂಧೆ ಬಣ ಚುನಾವಣಾ ಆಯೋಗದ ಮುಂದಿಟ್ಟಿತ್ತು. ಈ ಮೊದಲು ಗದೆ, ಉದಯಿಸುತ್ತಿರುವ ಸೂರ್ಯ ಹಾಗೂ ತ್ರಿಶೂಲ ಚಿಹ್ನೆಯನ್ನು ಆಯ್ಕೆ ಮಾಡಿದ್ದ ಶಿಂಧೆ ಬಣದ ಆಯ್ಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿ ಮಂಗಳವಾರ ಹೊಸ ಚಿಹ್ನೆಗಳ ಪಟ್ಟಿ ನೀಡುವಂತೆ ಸೂಚಿಸಿತು.
ಈ ನಡುವೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ಶಿವಸೇನೆಯ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಅಂತಿಮಗೊಳಿಸಿರುವ ಆಯೋಗ ಧಗಧಗಿಸುವ
ಪಂಜು ಚಿಹ್ನೆಯನ್ನು ನಿನ್ನೆಯೇ ನೀಡಿತ್ತು.
ಶಿವಸೇನೆಯ ಮೂಲ ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗ ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದೆ. ಅಂಧೇರಿ ಪೂರ್ವ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಉಭಯ ಬಣಗಳಿಗೆ ಪ್ರತ್ಯೇಕ ಚಿಹ್ನೆ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿದೆ. ನವೆಂಬರ್ 3 ರಂದು ಚುನಾವಣೆ ನಡೆಯಲಿದೆ. ಈ ನಡುವೆ ಶಿವಸೇನೆಯ ಚುನಾವಣಾ ಚಿಹ್ನೆ ಬಿಲ್ಲು ಮತ್ತು ಬಾಣಗಳನ್ನು ಅಮಾನತುಗೊಳಿಸಿರುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ನ್ಯಾಯಾಲಯದ ಕಟ್ಟೆ ಹತ್ತಿದೆ.
ಚುನಾವಣಾ ಆಯೋಗದ ಈ ನಿರ್ಧಾರದ ನಂತರ ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ.
“ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಕಟ್ಟಾ ಹಿಂದೂ ಧರ್ಮದ ನಿಜವಾದ ವಾರಸುದಾರರು ನಾವು… ಗಣ್ಯರ ರಕ್ಷಣೆಗಾಗಿ ನಾವು ಗುರಾಣಿಯನ್ನು ಹಿಡಿಯುತ್ತೇವೆ ಮತ್ತು ದುಷ್ಟರ ನಾಶಕ್ಕಾಗಿ ನಮ್ಮ ಕೈಯಲ್ಲಿ ಕತ್ತಿಯನ್ನು ಹಿಡಿಯುತ್ತೇವೆ” ಎಂದು ಅವರು ಬರೆದಿದ್ದಾರೆ.
“ಬಾಳಾ ಸಾಹೇಬರ ಶಿವಸೇನೆಗೆ ಗುರಾಣಿ, ಖಡ್ಗದ ಚಿಹ್ನೆ ಸಿಕ್ಕಿದೆ. ಇದು ಹಳೆಯ ಚಿಹ್ನೆ. ಶಿವಸೈನಿಕರಿಗೆ ಇದು ಹೊಸ ಸಂಕೇತವಲ್ಲ. ಆದರೆ ಅನ್ಯಾಯದ ವಿರುದ್ಧ ಹೋರಾಡಲು ನಾವು ಆಶೀರ್ವದಿಸಿದ್ದೇವೆ. ಈ ಗುರಾಣಿ ಮತ್ತು ಕತ್ತಿಯಿಂದ ನಾವು ನಮ್ಮ ತಲೆ ಎತ್ತಲಿದ್ದೇವೆ. ಅನ್ಯಾಯದ ವಿರುದ್ಧ ಧ್ವನಿ.ಆದರೆ ಈ ಚಿಹ್ನೆ ತಾತ್ಕಾಲಿಕ ಎಂದು ನಾನು ಹೇಳುತ್ತೇನೆ.ಭವಿಷ್ಯದಲ್ಲಿ ನಮಗೆ ಶಿವಸೇನೆಯ ಬಿಲ್ಲು ಬಾಣದ ಚಿಹ್ನೆ ಸಿಗಲಿದೆ ಎಂದು ನಂಬಿದ್ದೇವೆ.ಆದರೆ ನಮಗೆ ಶಿವಸೇನೆಯ ಚಿಹ್ನೆ ಸಿಕ್ಕಿದೆ.ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಬಾಳಾಸಾಹೇಬರ ಶಿವಸೇನೆಯ ನಾಯಕಿ ಶೀತಲ್ ಮ್ಹಾತ್ರೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.