ಬೆಂಗಳೂರು: ಪಠ್ಯಕ್ರಮ ಬೋಧನೆ ಮುಕ್ತಾಯ ಕಾರಣಕ್ಕೆ ಪರೀಕ್ಷಾ ತಯಾರಿ ಹೆಸರಲ್ಲಿ ಯಾವುದೇ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡುವಂತಿಲ್ಲ. ಪರೀಕ್ಷೆ ಆರಂಭದ ತನಕವೂ ಪಠ್ಯ ಪುನರ್ಮನನ ತರಗತಿಗಳನ್ನು ನಡೆಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಪ್ರಾಂಶುಪಾಲರಿಗೆ ಸೂಚಿಸಿದೆ. ಫಲಿತಾಂಶ ಸುಧಾರಣೆಗಾಗಿ ಕ್ರಮ ಕೈಗೊಂಡಿರುವ ಇಲಾಖೆಯು, ಜೂನ್ನಿಂದ ಮಾರ್ಚ್ ಅಂತ್ಯದವರೆಗೆ ತರಗತಿ ನಡೆಸಲು ಈಗಾಗಲೇ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ. ಆದರೆ ಡಿಸೆಂಬರ್ ಅಂತ್ಯದ ವೇಳೆಗೆ ಪಠ್ಯಕ್ರಮ ಬೋಧನೆ ಮುಕ್ತಾಯಗೊಳಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗೆ ಕಾಲೇಜು ಹಂತದಲ್ಲೇ ರಜೆ ಘೋಷಿಸುವುದು ಅಥವಾ ತರಗತಿಗಳನ್ನು ನಡೆಸದಿರುವುದು ಹಿಂದಿನ ವರ್ಷಗಳಲ್ಲಿ ಕಂಡುಬಂದಿದೆ. ಇದಕ್ಕೆ ಅವಕಾಶವಿಲ್ಲ. ಫೆ.28ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿವೆ. ಹಾಗಾಗಿ ಫೆ.27ರವರೆಗೆ ತರಗತಿ ಪಾಠ ನಡೆಸಬೇಕೆಂದು ಸೂಚಿಸಿದೆ.


