ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿದೆ. ಕೆಲವೇ ಕ್ಷಣಗಳಲ್ಲಿ ಮಾಜಿ ಸಚಿವರನ್ನು ಕೋರ್ಟ್ಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ ನಡೆದಿತ್ತು.
40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.