ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಕಾಂಗ್ರೆಸ್ ಶಾಸಕ ಬಸವನಗೌಡ ದದ್ದಲ್ ಅವರ ಮನೆಗಳ ಮೇಲೆ ಇಂದು ಮುಂಜಾನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಾಗೇಂದ್ರ ಅವರಿಗೆ ಸೇರಿದ ಡಾಲರ್ಸ್ ಕಾಲೋನಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಅವರ ಆಸ್ತಿಗಳಿರುವ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಲ್ಲಿ ನಾಲ್ಕು ಕಡೆ ದಾಳಿಗಳು ನಡೆದಿವೆ. ಬಳ್ಳಾರಿಯ ಅವರ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಯಚೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿಬಿಐ ಮಧ್ಯೆ ಪ್ರವೇಶಿಸಬಹುದು ಎಂಬ ಮಾಹಿತಿ ದೊರೆತಿತ್ತು.
ವಾಲ್ಮೀಕಿ ನಿಗಮದ ಹಗರಣದಲ್ಲಿ 183 ಕೋಟಿ ರೂ. ಅವ್ಯವಹಾರ ನಡೆದಿತ್ತು. ಇದರ ವ್ಯಾಪ್ತಿ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರೆಗೂ ವ್ಯಾಪಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಡೆತ್ನೋಟ್ನಲ್ಲಿಯೂ ಸಚಿವರ ಬಗ್ಗೆ ಉಲ್ಲೇಖ ಇದೆ.
ಬ್ಯಾಂಕ್ಗಳಲ್ಲಿ ಬಹುಕೋಟಿ ಹಣ ಅಕ್ರಮ ನಡೆದಾಗ ಈ ವಿಚಾರದಲ್ಲಿ ರಾಜ್ಯ ಯಾವುದೇ ಒಪ್ಪಿಗೆ ನೀಡದೆಯೂ ಸಿಬಿಐ ಹಾಗೂ ಇಡಿ ಇದರಲ್ಲಿ ಮಧ್ಯೆ ಪ್ರವೇಶಿಸಿ ತನಿಖೆ ಕೈಗೆತ್ತಿಕೊಳ್ಳಬಹುದಾಗಿದೆ. ಎರಡೂ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ಆಸಕ್ತಿ ವಹಿಸಿವೆ ಎಂದು ಗೊತ್ತಾಗಿತ್ತು. ಅಕ್ರಮ ನಡೆದ ಸಂದರ್ಭದಲ್ಲಿ ಬಿ. ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಮಹತ್ವ ಪಡೆದಿದೆ.
ಇಂದು ನಾಗೇಂದ್ರ ಹಾಗೂ ದದ್ದಲ್ ಇಬ್ಬರೂ ಎಸ್ಐಟಿ ವಿಚಾರಣೆಯನ್ನೂ ಮತ್ತೆ ಎದುರಿಸಬೇಕಿದೆ. ನಿನ್ನೆ ಇಬ್ಬರೂ ಕ್ರಮವಾಗಿ ಎಂಟು ಹಾಗೂ ನಾಲ್ಕು ಗಂಟೆಗಳ ಕಾಲ ಎಸ್ಐಟಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದರು. ಹಲವಾರು ವಿಚಾರಗಳಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಂದು ಮತ್ತೆ ಇಬ್ಬರಿಗೂ ಬುಲಾವ್ ನೀಡಲಾಗಿದೆ. ಇಡಿ ದಾಳಿಯ ಸಂಕಷ್ಟದ ಜೊತೆಗೆ ಎಸ್ಐಟಿ ವಿಚಾರಣೆಯ ತಲೆನೋವನ್ನು ಕೂಡ ಇವರಿಬ್ಬರು ಏಕಕಾಲಕ್ಕೆ ಎದುರಿಸಬೇಕಿದೆ.