ಬೆಳಗಾವಿ: ಸರಕಾರ ನೀಡುತ್ತಿರುವ ಪೌಷ್ಠಿಕಾಂಶಗಳಿರುವ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ, ರಾಗಿ ಮಾಲ್ಟ್ ಹಾಗೂ ಬಿಸಿ ಊಟ ಮಕ್ಕಳ ಸದೃಢತೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದರು.
ನಗರದ ಕಣಬರ್ಗಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ (ಫೆ.22) ಶಾಲಾ ಶಿಕ್ಷಣ ಇಲಾಖೆ ಹಾಗೂ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್, ಕೆಎಂಎಫ್ ಸಂಸ್ಥೆ ಸಹಯೋಗದಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆಯ ಜಿಲ್ಲಾ ಮತ್ತು ತಾಲೂಕ ಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರದ ಉತ್ತಮ ಯೋಜನೆ ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹಾಗೂ ವ್ಯಕ್ತಿತ್ವ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕು ಎಂದರು.
ಡಿಡಿಪಿಐ ಮೋಹನ್ ಕುಮಾರ್ ಹಂಚಾಟೆ ಅವರು, ಸರಕಾರಿ ಸೌಲಭ್ಯಗಳ ಮಹತ್ವ ಹಾಗೂ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವಂತೆ ತಿಳಿಸಿದರು.
ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಅವರು, ಈಗಾಗಲೇ ಮಕ್ಕಳಿಗೆ ಸರಕಾರದಿಂದ ದೊರೆಯುತ್ತಿರುವ ಉಚಿತ ಸೌಲಭ್ಯಗಳ ಮಹತ್ವ ಹಾಗೂ ರಾಗಿ ಮಾಲ್ಟ್ ಸೇವಿಸುವುದರಿಂದ ಅಪೌಷ್ಟಿಕತೆ ನಿವಾರಣೆಯ ಕುರಿತು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳೊಂದಿಗೆ ನೇರ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳಾದ ಸಾಕ್ಷಿ ಪೂಜಾರಿ ಹಾಗೂ ಬಸವರಾಜ ದೇವಜಿ ಸಚಿವ ಬಂಗಾರಪ್ಪ ಅವರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಗರಸೇವಕಿ ಅಸ್ಮಿತಾ ಪಾಟೀಲ, ತಾಪಂ ಇಒ ರಾಮರೆಡ್ಡಿ ಪಾಟೀಲ, ಬೆಳಗಾವಿ ನಗರ ವಲಯದ ಬಿಇಒ ಎಲ್. ಎಸ್. ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಐ.ಡಿ.ಹಿರೇಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮನಗೌಡ ಮುದುಕನಗೌಡರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.