ಬೆಳಗಾವಿ : ರಜೆ ನೀಡಲಿಲ್ಲ ಎಂಬ ಕಾರಣಕ್ಕೆ ಬೆಳಗಾವಿ ನಗರ ಸಾರಿಗೆ ಬಸ್ ಚಾಲಕರೊಬ್ಬರು ಬಸ್ಸಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಗಾವಿ ಎರಡನೇ ಬಸ್ ಘಟಕದಲ್ಲಿ ಬುಧುವಾರ ಮುಂಜಾನೆ 6.30ರ ಹೊತ್ತಿಗೆ ಸಂಭವಿಸಿದೆ.
47 ವರುಷದ ಬಾಲಚಂದ್ರ ಹೂಕೋಜಿ ಆತ್ಮಹತ್ಯೆ ಮಾಡಿಕೊಂಡವರ. ರಾಮದುರ್ಗ ತಾಲೂಕಿನ ಇವರು ಹಳೆ ಗಾಂಧಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಇವರ ಅಕ್ಕನ ಮಗಳ ಮದುವೆ ದಿನ ನಿಶ್ಚಯವಾಗಿದರಿಂದ ತಮ್ಮ ಹಿರಿಯ ಅಧಿಕಾರಿಗಳಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅದು ತಿರಸ್ಕಾರ ಗೊಂಡಿತ್ತು. ಅದಕ್ಕೇ ಪದೇ ಪದೇ ಅರ್ಜಿ ಸಲ್ಲಿಸಿದ್ದರೂ ಅವು ಪರಿಗಣಿಸಲ್ಪಟ್ಟಿರಲಿಲ್ಲ. “ಚಾಲಕ ಬಾಲಚಂದ್ರ ಹೂಕೋಜಿ ಹಲವು ದಿನಗಳಿಂದ ರಜೆ ಕೇಳುತ್ತಿದ್ದರಂತೆ ಆದರೆ ಹಿರಿಯ ಅಧಿಕಾರಿಗಳು ರಜೆ ನೀಡಿರಲಿಲ್ಲ. ಈಗ ತನ್ನ ಅಕ್ಕನ ಮಗಳ ಮದುವೆ ಇದೆ. ಅದಕ್ಕಾಗಿ ರಜೆ ಬೇಕು ಎಂದು ಕೇಳಿದ್ದರಂತೆ ಆದಾಗ್ಯೂ ರಜೆ ನೀಡಿಲ್ಲ. ಇದ್ರಿಂದ ಬೇಸರಗೊಂದ ಬಾಲಚಂದ್ರ ಬಸ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,” ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಬೆಳಗಾವಿ ನಗರದ 2ನೇ ಡಿಪೋಗೆ ಸೇರಿದ್ದ ಹುಕೋಜಿ ಬೆಳಗಾವಿಯ ಸಿಬಿಟಿಯಿಂದ ಶಹಾಪುರ, ವಡಗಾವಿಗೆ ಬಸ್ ಚಾಲನೆ ಮಾಡುತ್ತಿದ್ದರು. ಬುಧುವಾರ ಮುಂಜಾನೆ 6 ಗಂಟೆಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡ ಅವರು ಬಸ್ಸಿಗೆ ತೆರಳಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಬೆಳಗಾವಿ ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ಪತ್ರಕರ್ತರಿಗೆ ತಿಳಿಸಿದರು.
ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.