ಪ್ರತಿಭೆಗೆ ಮಾನ್ಯತೆ ಸಿಗುತ್ತದೆ. ಸತ್ಯ, ಶುದ್ದ ಕಾಯಕ ಮಾಡಿದವರಿಗೆ ಗೌರವ ಸಿಗುತ್ತದೆ. ಎರಡನೇ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ದಿ ಪಡೆದ ಕಾಯಕಯೋಗಿ ಎಸ್.ಜಿ.ಬಾಳೆಕುಂದ್ರಿಯವರ ಸೇವೆ ಅನುಪಮ. ಇಂದು ದೇಶದ ಪ್ರಧಾನ ಸೇವಕರಾಗಿರುವ ನರೇಂದ್ರ ಮೋದಿ ನಮ್ಮ ಸಮಾಜದವರು ಎನ್ನುವುದು ನಮಗೆ ಹೆಮ್ಮೆ. ಬೆಳಗುವ ನಂದಾದೀಪದಂತೆ ನೀವೆಲ್ಲರೂ ಸಮಾಜಕ್ಕೆ ಕೊಡುಗೆ ನೀಡಬೇಕು.
ಬೆಳಗಾವಿ : ಅತ್ಯಂತ ಪರಿಶ್ರಮ ಪಡುವ ಸಮಾಜ ಎಂದೇ ಗುರುತಿಸಿಕೊಂಡಿರುವ ಗಾಣಿಗ ಸಮಾಜದಲ್ಲಿ ಜನಿಸಿ ದೇಶದ ಪ್ರಧಾನಿ ಹುದ್ದೆಯಂತಹ ಮಹತ್ವದ ಸ್ಥಾನ ಅಲಂಕರಿಸಿರುವ ನರೇಂದ್ರ ಮೋದಿ ಅವರಂತೆ, ಗಾಣಿಗ ಸಮಾಜ ಬಂಧುಗಳು ಕಠಿಣ ಪರಿಶ್ರಮ ಸಾಧಿಸಿ ಸಾಧನೆ ಮಾಡಬೇಕು ಎಂದು ಖ್ಯಾತ ವೈದ್ಯೆ ಹಾಗೂ ಪ್ರಸಿದ್ಧ ಬರಹಗಾರ್ತಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಕಿವಿಮಾತು ಹೇಳಿದ್ದಾರೆ. ಬೆಳಗಾವಿಯ ಎಸ್.ಜಿ.ಬಾಳೆಕುಂದ್ರಿ ಸಭಾಭವನದಲ್ಲಿ ರವಿವಾರ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಮ್ಮ ಮನಸ್ಸಿನಲ್ಲಿ ಹೀಗೆ ಆಗಬೇಕು ಎಂದು ಸಂಕಲ್ಪಿಸಿದರೆ ಅದನ್ನು ಸಾಧಿಸಲು ಸಾಧ್ಯವಿದೆ. ಆದರೆ, ನನ್ನ ಭವಿಷ್ಯ, ಹಣೆಬರಹ ಹೀಗೆ ಬರೆದಿದೆ, ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ನಾವು ಅಂದುಕೊಂಡರೆ ಹಾಗೆಯೇ ಆಗುತ್ತೇವೆ. ಅದನ್ನು ಮೆಟ್ಟಿನಿಂತು ಮುನ್ನುಗ್ಗಿದರೆ ದೇಶದ ಭವಿಷ್ಯವನ್ನೇ ನಾವೆಲ್ಲರೂ ನಿರ್ಮಿಸಲು ಸಾಧ್ಯವಿದೆ ಎಂದು ಹೇಳಿದರು.
ಮುಂದೆ ಗುರಿ, ಹಿಂದೆ ಗುರುವನಿಟ್ಟುಕೊಂಡರೆ ಪ್ರತಿಯೊಬ್ಬರೂ ಜೀವನದಲ್ಲಿ ಅಪಾರ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ. ನಮ್ಮ ಮನಸ್ಸಿನಲ್ಲಿ ಸದ್ಭಾವನೆ, ಸದೃಢತೆ, ಸದ್ವಿಚಾರಗಳು ತುಂಬಿಕೊಂಡಿದ್ದರೆ ನಮ್ಮ ಹೃದಯವು ಚೆನ್ನಾಗಿ ಅದಕ್ಕೆ ಮಿಡಿಯುತ್ತದೆ. ಆದರೆ, ನಮ್ಮಲ್ಲಿ ಸಿಡುಕು ಸ್ವಭಾವ ಇದ್ದರೆ ನಕಾರಾತ್ಮಕ ಶಕ್ತಿಯೇ ಹೆಚ್ಚು ವೃದ್ಧಿಸುತ್ತದೆ. ಇದಕ್ಕೆ ಯಾರು ಅವಕಾಶ ಕೊಡಬಾರದು. ಎಲ್ಲರನ್ನೂ ನಗುನಗುತ್ತಾ, ಪ್ರೀತಿಯಿಂದ ಕಾಣುವ ಸೌಹಾರ್ದ ಗುಣ ನಮ್ಮದಾಗಬೇಕು. ಶ್ರದ್ಧೆ-ಶುದ್ಧ ಕಾಯಕ ಮಾಡಿದರೆ ಶಿವನು ನಮ್ಮ ಪಾಲಿಗೆ ಬರುತ್ತಾನೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಧನೆಯ ಪಥದಲ್ಲಿ ಮುನ್ನುಗ್ಗಬೇಕು ಎಂದು ಅವರು ಸಲಹೆ ನೀಡಿದರು.
ಸನಾತನ ಧರ್ಮದ ಋಗ್ವೇದದಲ್ಲೇ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡಲಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲೇ ಪಾನ ನಿಷೇಧದ ಉಲ್ಲೇಖವಿದೆ. ವ್ಯಸನಮುಕ್ತ ಸಮಾಜದಿಂದ ದೇಶ ಹಾಗೂ ಸಮಾಜಕ್ಕೆ ಒಳಿತಾಗಲಿದೆ. ನಮ್ಮ ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ನಾವೆಲ್ಲರೂ ವ್ಯಸನ ಮುಕ್ತ ಸಮಾಜದ ಕನಸು ಕಂಡು ಉತ್ತಮ ವ್ಯಕ್ತಿಗಳಾಗಬೇಕು ಎಂದು ಅವರು ಕರೆ ನೀಡಿದರು. ಗಾಣಿಗ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳು ಜನಿಸಿ ಸಾಧನೆ ಮಾಡಿದ್ದಾರೆ. ಅವರಲ್ಲಿ ಎರಡನೇ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿರುವ ಎಸ್ ಜಿ ಬಾಳೆಕುಂದ್ರಿ ಅವರು ಮಾಡಿರುವ ಸಾಧನೆ ಅನುಪಮ. ಅವರ ಸುಪುತ್ರಿ ಎನ್ನುವುದು ನನ್ನ ಪಾಲಿಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ಎಲ್ಲೇ ಹೋಗಲಿ, ಜನ ಅವರ ಹೆಸರನ್ನು ಹೇಳುತ್ತಾರೆ. ಅವರು ಮಾಡಿರುವ ಸಾಧನೆ ಜನಮನದಲ್ಲಿ ಹಸಿರಾಗಿ ಉಳಿದುಕೊಂಡಿದೆ. ನಾನು ಸಹಾ ಜೀವನದಲ್ಲಿ ಸಾಧನೆ ಮಾಡಿರುವ ಸಮಾಧಾನ ಇದೆ. ಏಳು ವಿಶ್ವ ದಾಖಲೆಗಳು ನನ್ನ ಮುಡಿಗೇರಿವೆ. ಜಗತ್ತಿನ ವಿವಿಧ ದೇಶಗಳನ್ನು ಸುತ್ತಿ ಅಲ್ಲಿನ ಜನರಿಂದ ಅಪಾರ ಮೆಚ್ಚುಗೆ ಗಳಿಸಿರುವುದು ನನಗೆ ಬಹಳ ಸಂತಸ ನೀಡುತ್ತದೆ. ಈ ನಿಟ್ಟಿನಲ್ಲಿ ಗಾಣಿಗ ಸಮಾಜದಲ್ಲಿ ಜನಿಸಿರುವ ತಾವೆಲ್ಲರೂ ಉನ್ನತ ವಿದ್ಯೆ ಪಡೆದುಕೊಂಡು ಭವಿಷ್ಯದ ಜೀವನದಲ್ಲಿ ಉತ್ತುಂಗಕ್ಕೆ ಏರಬೇಕು ಎಂದು ಅವರು ಕರೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಗಣನೀಯ ಅಂಕ ಪಡೆದು ಸಾಧನೆಗೈದ ಪ್ರತಿಭಾವಂತ ಗಾಣಿಗ ಸಮಾಜದ ವಿದ್ಯಾರ್ಥಿಗಳನ್ನು ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಅವರು ಸನ್ಮಾನಿಸಿ, ಭವಿಷ್ಯದಲ್ಲಿ ಮಹಾನ್ ವ್ಯಕ್ತಿಗಳಾಗಿ ಸಮಾಜಕ್ಕೆ ಕೀರ್ತಿ ತರುವಂತೆ ಆಶೀರ್ವದಿಸಿದರು.
ವೇದಿಕೆ ಮೇಲೆ ನಗರ ಗಾಣಿಗ ಸಮಾಜದ ಅಧ್ಯಕ್ಷ ಪ್ರಕಾಶ ಬಾಳೇಕುಂದ್ರಿ ಹಾಜರಿದ್ದರು. ಬೆಳಗಾವಿ ಗಾಣಿಗ ನೌಕರರ ವೇದಿಕೆ ಪದಾಧಿಕಾರಿಗಳಾದ ಉಲ್ಲಾಸ ಬಾಳೇಕುಂದ್ರಿ, ಶಿವರಾಯ ಏಳುಕೋಟಿ, ಬಾಲಚಂದ್ರ ಸವಣೂರ ಹಾಜರಿದ್ದರು.