ವಿವಿ ಕಾಮಗಾರಿ ಕರ್ಮಕಾಂಡ ಸಚಿವರ
ಬೆಳಗಾವಿ: ಆರಂಭದಿಂದಲೂ ತೀವ್ರ ವಿವಾದಕ್ಕೊಳಗಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಿರೇಬಾಗೇವಾಡಿ ಬಳಿಯ ನೂತನ ಕ್ಯಾಂಪಸ್ ಕಾಮಗಾರಿಯ ಕರ್ಮಕಾಂಡ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಎದುರೇ ಬಟಾ ಬಯಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತ ವಿಶ್ವವಿದ್ಯಾಲಯಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಸಚಿವ ಸುಧಾಕರ ಅವರು ವಿಶ್ವವಿದ್ಯಾಲಯದ ಕಾಮಗಾರಿ ಪರಿಶೀಲನೆಗೆಂದು ತೆರಳಿದ್ದರು. ಈ ವೇಳೆ ಸ್ವತಃ ವಿಶ್ವವಿದ್ಯಾಲಯದ ಅಧಿಕಾರಿ, ಸಿಬ್ಬಂದಿಗಳೇ ಕಾಮಗಾರಿಯ ಕರ್ಮಕಾಂಡವನ್ನು ಹೊರಗೆಡವಿದರು.
ಇಡೀ ವಿಶ್ವವಿದ್ಯಾಲಯದ ಯೋಜನೆಯೇ ಅವೈಜ್ಞಾನಿಕವಾಗಿದೆ. ಯಾವುದೋ ವಾಣಿಜ್ಯ ಕಟ್ಟಡಗಳ ನಿರ್ಮಾಣದ ಗುತ್ತಿಗೆದಾರರಿಗೆ ವಿಶ್ವವಿದ್ಯಾಲಯದ ಕಟ್ಟಡ ಗುತ್ತಿಗೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಯೊಂದು ಹೇಗಿರಬೇಕು ಎನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಸಭಾಭವನ ಸೇರಿದಂತೆ ಪ್ರತಿಯೊಂದು ಕಟ್ಟಡ, ಕೊಠಡಿಗಳೂ ವಿಶ್ವವಿದ್ಯಾಲಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಇಲ್ಲ. ಉಪನ್ಯಾಸಕರ ಕೊಠಡಿ ನಿರ್ಮಾಣದ ಯೋಜನೆಯನ್ನೇ ರೂಪಿಸಲಾಗಿಲ್ಲ, ಅಗತ್ಯ ಪ್ರಮಾಣದ ಶೌಚಾಲಯವನ್ನೂ ನಿರ್ಮಿಸುವ ಪ್ರಸ್ತಾಪವಿಲ್ಲ ಎಂದು ಹಂಗಾಮಿ ಕುಲಪತಿ ವಿಜಯ್ ನಾಗಣ್ಣವರ್ ಹಾಗೂ ಇನ್ನಿತರ ಸಿಬ್ಬಂದಿ ಸಚಿವರೆದುರು ಬಯಲು ಮಾಡಿದರು.
ಕಟ್ಟಡ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಕೈಯಿಂದ ಕೆರೆದರೆ ಇಟ್ಟಿಗೆಗಳು ಕಿತ್ತು ಬರುತ್ತವೆ. ಗಟ್ಟಿಯಾಗಿ ದೂಡಿದರೆ ಕಂಪೌಂಡ್ ವಾಲ್ ಬೀಳುವಂತಿದೆ. ನೀರಿನ ತೀವ್ರ ಕೊರತೆಯಿಂದಾಗಿ ಕ್ಯೂರಿಂಗ್ ಕೂಡ ಮಾಡಲಾಗುತ್ತಿಲ್ಲ. ಗುತ್ತಿಗೆದಾರರನ್ನು ಕೇಳಿದರೆ 10 ವರ್ಷ ಕಟ್ಟಡಕ್ಕೆ ಏನೂ ತೊಂದರೆ ಇಲ್ಲ ಎಂದು ಹೇಳುತ್ತಾರೆ ಎಂದು ಅವರು ಅಲವತ್ತುಕೊಂಡರು.
ಹೀಗೇ ಮುಂದುವರಿದರೆ ಕಟ್ಟಡ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ಜೊತೆಗೆ ವಿಶ್ವವಿದ್ಯಾಲಯ ಎಂದು ಹೇಳಿಕೊಳ್ಳುವಂತೆಯೂ ಇಲ್ಲ. ಒಳಗಡೆಯ ರಸ್ತೆಗಳೂ ಸರಿಯಾಗಿಲ್ಲ. ಒಟ್ಟಾರೆ ಇದೊಂದು ವಿಶ್ವವಿದ್ಯಾಲಯದ ರೀತಿಯಲ್ಲೇ ಇಲ್ಲ. ಈಗಿರುವ ವಿಶ್ವವಿದ್ಯಾಲಯಕ್ಕಿಂತಲೂ ಕಳಪೆ ವಿಶ್ವವಿದ್ಯಾಲಯ ಇಲ್ಲಿ ಆಗಲಿದೆ. ಹಾಗಾಗಿ ಈ ಯೋಜನೆಯನ್ನು ಸಂಪೂರ್ಣ ಹೊಸದಾಗಿ ರೂಪಿಸಬೇಕು ಎಂದು ಅವರು ಸಚಿವರಲ್ಲಿ ವಿನಂತಿಸಿದರು.
ಕಂಪೌಂಡ್ ಗೋಡೆ ಮತ್ತಿತರ ಕಾಮಗಾರಿಗಳು ಕಳಪೆಯಾಗಿದ್ದರಿಂದ ಈಗಾಗಲೆ 3 ಬಾರಿ ಗುತ್ತಿಗೆದಾರರಿಗೆ ನೋಟೀಸ್ ನೀಡಲಾಗಿದೆ. ನೀರಿನ ತೀವ್ರ ಸಮಸ್ಯೆ ಇದ್ದು, ತುರ್ತಾಗಿ ನೀರಿನ ವ್ಯವಸ್ಥೆಯಾಗಬೇಕು. ಇಲ್ಲವಾದಲ್ಲಿ ಗುಣಮಟ್ಟದ ಕಾಮಗಾರಿ ನಡೆಯುವುದಿಲ್ಲ ಎಂದು ವಿಶ್ವವಿದ್ಯಾಲಯ ಕುಲಸಚಿವೆ ರಾಜಶ್ರೀ ಜೈನಾಪುರೆ ಸಚಿವರಿಗೆ ತಿಳಿಸಿದರು.
*ದಂಗಾದ ಸಚಿವರು*
ವಿಶ್ವವಿದ್ಯಾಲಯದ ಸಿಬ್ಬಂದಿ ವಿವರಣೆ ಕೇಳಿದ ನಂತರ ಸ್ವತಃ ಪ್ರತಿಯೊಂದು ಕಟ್ಟಡಗಳ ಕಾಮಗಾರಿಯನ್ನು ವೀಕ್ಷಿಸಿದ ಸಚಿವ ಸುಧಾಕರ, ಕೆಲ ಕ್ಷಣ ದಂಗಾದರು. ಕ್ವಾಲಿಟಿ ಈಸ್ ವೆರಿ ಪುವರ್, ಈ ರೀತಿಯ ಕಾಮಗಾರಿ ಒಪ್ಪಲು ಸಾಧ್ಯವಿಲ್ಲ. ಗುಣಮಟ್ಟದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ತಿಳಿಸಿದರು.
ಕಾಮಗಾರಿಯ ಅತ್ಯಂತ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕುರಿತು ಸಹ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಡೀ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಅವರು ತಿಳಿಸಿದರು.
ತಕ್ಷಣ ಹೊಸದಾಗಿ ಯೋಜನೆ ರೂಪಿಸಬೇಕು. ಸರಕಾರಕ್ಕೆ ಹೆಚ್ಚಿನ ಹೊರೆಯಾಗದಂತೆ ಯೋಜನೆಯನ್ನು ಪುನಃ ತಯಾರಿಸಿ. ಈ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳಕರ್ ಅವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಮಾರ್ಗದರ್ಶನದಲ್ಲೇ ಕಾಮಗಾರಿ ಮುಂದುವರಿಯಬೇಕು. ಮನಸ್ಸಿಗೆ ಬಂದಂತೆ ಕಾಮಗಾರಿ ನಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಚಿವ ಡಾ.ಸುಧಾಕರ ಅವರ ವಿನಂತಿಯಂತೆ ಸ್ಥಳಕ್ಕೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಾಜಕೀಯ ಕಾರಣಕ್ಕಾಗಿ ತರಾತುರಿಯಲ್ಲಿ ಮಾಡಲಾಗಿರುವ ಯೋಜನೆ ಇದಾಗಿದ್ದು, ನಾನು ರೂಪಿಸಿದ್ದ ಕುಡಿಯುವ ನೀರಿನ ಯೋಜನೆಯನ್ನು ತಡೆಯುವ ಉದ್ದೇಶದಿಂದ ಹಿಂದಿನ ಸರಕಾರ ಹೊಟ್ಟೆಕಿಚ್ಚಿನಿಂದ ತಂದ ಯೋಜನೆಯಾಗಿದೆ. ಆದರೆ, ಶಿಕ್ಷಣವೂ ಕೂಡ ಸಮಾಜಕ್ಕೆ ಮುಖ್ಯ ಎನ್ನುವ ಕಾರಣದಿಂದ ನಾನು ಯಾವುದೇ ರೀತಿಯಲ್ಲಿ ಅಡ್ಡಗಾಲು ಹಾಕದೆ ಸುಮ್ಮನಿದ್ದೇನೆ. ಆದರೆ ವಿಶ್ವವಿದ್ಯಾಲಯದ ಕಾಮಗಾರಿ ನಡೆಯುತ್ತಿರುವ ರೀತಿ ನೋಡಿದರೆ ತೀವ್ರ ನೋವಾಗುತ್ತದೆ. ಇದು ನೂರಾರು ವರ್ಷ ಇರಬೇಕಾದ ಜ್ಞಾನ ದೇಗುಲವಾಗಬೇಕು. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವ ಕಟ್ಟಡವಾಗಬೇಕು. ಹಾಗಾಗಿ ದಯವಿಟ್ಟು ಸೂಕ್ತ ಕ್ರಮ ತೆಗೆದುಕೊಂಡು ಒಂದು ಉತ್ತಮ ವಿಶ್ವವಿದ್ಯಾಲಯವಾಗುವಂತೆ ನಿರ್ಮಾಣ ಮಾಡಬೇಕು ಎಂದು ವಿನಂತಿಸಿದರು.
ಗುಡ್ಡದ ಮೇಲಿರುವ ಐತಿಹಾಸಿಕ ದೇವಸ್ಥಾನಕ್ಕೆ 10 ಎಕರೆ ಜಾಗ ಒದಗಿಸಿ, ವಿಶ್ವವಿದ್ಯಾಲಯದಿಂದಲೇ ದೇವಸ್ಥಾನ ಜೀರ್ಣೋದ್ಱಾ ಮಾಡಬೇಕು. ನಾನು ಯಾವತ್ತೂ ರೈತರ ಪರವಾಗಿ ನಿಂತುಕೊಳ್ಳುತ್ತೇನೆ. ಹಿಂದೆ ಆಗಿದ್ದು ಆಗಿದೆ. ಮುಂದೆ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು. ವಿಶ್ವವಿದ್ಯಾಲಯದ ಕಾಮಗಾರಿಗಳೂ ಉತ್ತಮವಾಗಿ ನಡೆಯಬೇಕು ಎಂದು ಹೆಬ್ಬಾಳಕರ್ ಕೋರಿದರು.
ಈ ವೇಳೆ ಅಲ್ಲಿಗೆ ಆಗಮಿಸಿದ್ದ ಹಿರೇಬಾಗೇವಾಡಿಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ರೈತರು, ನಮ್ಮನ್ನು ತಪ್ಪು ದಾರಿಗೆಳೆದು ಕುಡಿಯುವ ನೀರಿನ ಯೋಜನೆಯನ್ನು ತಪ್ಪಿಸಿ, ವಿಶ್ವವಿದ್ಯಾಲಯದ ಯೋಜನೆ ರೂಪಿಸಲಾಗಿದೆ. ನಮಗೆ ಕುಡಿಯುವ ನೀರಿನ ಯೋಜನೆ ಬೇಕು. ಅದಕ್ಕಾಗಿ ಅಗತ್ಯ ಜಾಗವನ್ನು ಬಿಟ್ಟುಕೊಡಬೇಕು. ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು. ಈಗಾಗಲೆ ಸಾಕಷ್ಟು ರೀತಿಯಲ್ಲಿ ರೈತರಿಗೆ ಹಿಂಸೆ ನೀಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿದರು.
ಇನ್ನು ಮುಂದೆ ಸಂಪೂರ್ಣ ಕಾಮಗಾರಿಯ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಲ್ಲಿ ವಿನಂತಿಸಿದ ಸಚಿವ ಸುಧಾಕರ, ಹೆಬ್ಬಾಳಕರ್ ಅವರ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿಯೊಂದನ್ನೂ ಅವರ ಗಮನಕ್ಕೆ ತಂದೇ ಮಾಡಬೇಕು. ಅವರ ಮಾರ್ಗದರ್ಶನದಲ್ಲೇ ಮುಂದುವರಿಯಬೇಕು ಎಂದು ಅಧಿಕಾರಿ, ಸಿಬ್ಬಂದಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಗುಡ್ಡದ ಮೇಲಿರುವ ಮಲ್ಲಪ್ಪನ ದೇವಸ್ಥಾನಕ್ಕೆ 10 ಎಕರೆ ಭೂಮಿ ಬಿಟ್ಟುಕೊಡುವಂತೆ ಸೂಚಿಸಿದ ಸಚಿವರು, ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸುವಂತೆ ತಿಳಿಸಿದರು. ಇಡೀ ವಿಶ್ವವಿದ್ಯಾಲಯದ ಕಾಮಗಾರಿಯನ್ನು ಸರಕಾರಕ್ಕೆ ಹೆಚ್ಚಿನ ಹೊರೆಯಾಗದಂತೆ ಹೊಸದಾಗಿ ರೂಪಿಸುವಂತೆ ಆದೇಶಿಸಿದರು.