ಕಾರವಾರ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಇಲ್ಲಿಯ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದರು.
ಆಸ್ಪತ್ರೆಯ ಹಾಸಿಗೆಗೆ ಬೆಡ್ ಶೀಟ್ ಪೂರೈಸಿದ್ದಕ್ಕೆ ಬಿಲ್ ಮೊತ್ತ ಪಾವತಿಗೆ ಲಂಚ ಕೇಳಿದ್ದಾಗಿ ಅಧೀಕ್ಷಕರ ವಿರುದ್ಧ ಅಂಕೋಲಾದ ಗುತ್ತಿಗೆದಾರ ಮೊಹಸೀನ್ ಖಾನ್ ದೂರು ನೀಡಿದ್ದರು. ಗುರುವಾರ ರೂ.30 ಸಾವಿರ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದರು.
ಬೆಡ್ ಶೀಟ್ ಪೂರೈಸಿದ್ದಕ್ಕೆ ಕ್ರಿಮ್ಸ್ ನಿಂದ ರೂ.3,34,200 ಬಿಲ್ ಪಾವತಿ ಬಾಕಿ ಇತ್ತು. ಅದನ್ನು ಬಿಡುಗಡೆ ಮಾಡಲು ರೂ.50 ಸಾವಿರಕ್ಕೆ ಡಾ.ಶಿವಾನಂದ ಬೇಡಿಕೆ ಇಟ್ಟಿದ್ದರು. ಎರಡು ದಿನದ ಹಿಂದೆ ರೂ.20 ಸಾವಿರ ನೀಡಿದ್ದೆ ಎಂದು ಗುತ್ತಿಗೆದಾರರು ದೂರು ನೀಡಿದ್ದರು. ಲಂಚ ನೀಡುವಾಗಲೇ ಅಧೀಕ್ಷಕರನ್ನು ವಶಕ್ಕೆ ಪಡೆಯಲಾಯಿತು ಎಂದು ಲೋಕಾಯುಕ್ತ ಎಸ್.ಪಿ ಕುಮಾರಚಂದ್ರ ತಿಳಿಸಿದರು.
ಆರೋಪಿಯು ಗ್ರೇಡ್-1 ಅಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆ, ಖಾಸಗಿ ಕಚೇರಿಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಲೋಕಾಯುಕ್ತ ಉಡುಪಿ ಜಿಲ್ಲೆಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.