ಬೆಳಗಾವಿ :
ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತದ ಜೈನ ಮುನಿಗಳಾದ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರು ಅಮಾನುಷವಾಗಿ ಹತ್ಯೆಗೀಡಾಗಿರುವುದು ತೀವ್ರ ನೋವು ಹಾಗೂ ಆಘಾತವನ್ನುಂಟು ಮಾಡಿದೆ ಎಂದು ಕೆ ಎಲ್ ಈ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷಗಳಿಂದ ಹೀರೆಕೋಡಿಯ ನಂದಿ ಪರ್ವತದಲ್ಲಿ ಕಾಮಕುಮಾರ ನಂದಿ ಮಹಾರಾಜರು ಧಾರ್ಮಿಕ ಸೇವೆ ಮಾಡುತ್ತಾ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದರು. ಸಾತ್ವಿಕ ಹಾಗೂ ಪಾರಮಾರ್ಥಿಕ ಚಿಂತನೆ ಮೂಲಕ ಕರ್ನಾಟಕ ಹಾಗೂ ಮಹಾರಾಷ್ಟ್ರದ ಬಹುಸಂಖ್ಯಾತ ಭಕ್ತರನ್ನು ಹೊಂದಿದ್ದರು. ವೈರಾಗ್ಯದ ಮೂರ್ತಿಗಳಾಗಿದ್ದ
ಶ್ರೀ ಮುನಿಗಳ ಹತ್ಯೆಯನ್ನು ದುಷ್ಕರ್ಮಿಗಳು ಅಮಾನುಷವಾಗಿ ಮಾಡಿರುವುದು ಅತ್ಯಂತ ಹೇಯಕರ.
ಇಂತಹ ಸಮಾಜಘಾತುಕ ದುಷ್ಕರ್ಮಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು, ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಬಾರದು. ಈ ದೇಶದ ಸಾಧು ಸಂತರಿಗೆ, ಮುನಿಗಳಿಗೆ, ಅನೇಕ ಮಠಗಳ ಪೂಜ್ಯರುಗಳಿಗೆ ಸೂಕ್ತವಾದ ರಕ್ಷಣೆಯನ್ನು ನೀಡುವಂತಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪೂಜ್ಯ ಶ್ರೀ ಮುನಿಗಳ ದಿವ್ಯಾತ್ಮಕ್ಕೆ ಭಾವಪೂರ್ಣ ಭಕ್ತಿಯ ನಮನಗಳನ್ನು ಸಲ್ಲಿಸಿದ್ದಾರೆ.