ತುಮಕೂರು :
ಅಖಂಡವಾಗಿ ಒಂದು ಪೀಠದ ಅಧಿಪತಿಯಾಗಿ ಒಂದಿನಿತೂ ಚ್ಯುತಿ ಬಾರದ ಹಾಗೆ ನಡೆದು ಜನಸಾಮಾನ್ಯರ ಹೃದಯ ಸಿಂಹಾಸನಗಳಲ್ಲಿ ಶಾಶ್ವತವಾಗಿ ನೆಲೆಸಿದವರು ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು. ಶ್ರೀಗಳು ಬದುಕಿರುವಾಗಲೇ ದಂತಕಥೆಯಾಗಿ ಜನಸೇವೆ ಮಾಡಿದರು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಜರುಗಿದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 116 ನೇ ಜನ್ಮ ದಿನೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಪೂಜ್ಯ ಶಿವಕುಮಾರ ಮಹಾಸ್ವಾಮೀಜಿಯವರು ದೀನದಲಿತರ, ಹಳ್ಳಿಗಾಡಿನ ಜನರ ಬದುಕನ್ನು ಸುಧಾರಿಸಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ನೀಡಿದ್ದಾರೆ. ಸಿದ್ಧಗಂಗೆಯಲ್ಲಿ ಮೌನ ಸಾಮಾಜಿಕ ಕ್ರಾಂತಿಯೇ ನಡೆದು ಹೋಗಿದೆ. ನೂರೊಂದು ಸ್ವಾಮಿಗಳನ್ನು ಸಂತರನ್ನು, ಪೀಠಾಧಿಪತಿಗಳನ್ನು ಕಂಡಿದ್ದೇನೆ. ಅಥಣಿಯ ಶಿವಯೋಗಿಗಳು, ಧಾರವಾಡದ ಮೃತ್ಯುಂಜಯ ಅಪ್ಪಗಳು, ಮುರಗೋಡದ ಮಹಾಂತ ಅಪ್ಪಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಶ್ರೀ ಶಿವಬಸವ ಮಹಾಸ್ವಾಮಿಗಳು ಹೀಗೆ ಈ ಪೂಜ್ಯರು ದಾಸೋಹಕ್ಕೆ ಸಾಕ್ಷಿಯಾಗಿದ್ದರು. ಇಂಥ ಸ್ವಾಮಿಗಳ ಕುಲಕ್ಕೆ ಆದರ್ಶಪ್ರಾಯರಾಗಿ ನೂರಕ್ಕೂ ಅಧಿಕ ವರ್ಷಗಳ ಕಾಲ ಕರ್ನಾಟಕವನ್ನು ಕನ್ನಡಿಗರನ್ನು ಹೆಮ್ಮೆಯಿಂದ ಬೀಗುವಂತೆ, ಗೌರವದಿಂದ ಬಾಗುವಂತೆ ಮಾಡಿದ ಪುಣ್ಯಪುರುಷ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ.
ಇಂದು ನನ್ನನ್ನು ಶ್ರೀಮಠಕ್ಕೆ ಕರೆದು ಗೌರವ ಸತ್ಕಾರವನ್ನು ನೀಡಿರುವುದು, ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ನನ್ನನ್ನು ಆಶೀರ್ವದಿಸಿರುವುದು ಸೌಭಾಗ್ಯವೆಂದುಕೊಂಡಿದ್ದೇನೆ. ಇದೆಲ್ಲವೂ ನನ್ನ ಸುದೀರ್ಘ ಐವತ್ತು ವರ್ಷಗಳ ಸೇವೆಯಲ್ಲಿ ಅಲ್ಪವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯ ಫಲವೆಂದುಕೊಂಡಿದ್ದೇನೆ. ಭಗವಂತನು ಕೆಲವು ಕಾರ್ಯಗಳನ್ನು ನನ್ನಿಂದ ನೆರವೇರಿಸಲು ಆಶೀರ್ವದಿಸಿದ್ದಾನೆ. ಅದರ ಶ್ರೇಯಸ್ಸು ಭಗವಂತನಿಗೆ ಹಾಗೂ ಕೆಎಲ್ಇ ಸಂಸ್ಥೆಯ ಸಂಸ್ಥಾಪಕ ಚೇತನಕ್ಕೆ ಸಲ್ಲಬೇಕೆಂಬುದು ನನ್ನ ಬಯಕೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ಧಗಂಗೆಯ ಪೂಜ್ಯ ಸಿದ್ಧಲಿಂಗ ಮಹಾಸ್ವಾಮೀಜಿ, ಪೂಜ್ಯ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಹಾಗೂ ಆಶಾ ಕೋರೆಯವರಿಗೆ ಪೂಜ್ಯರು ಸತ್ಕರಿಸಿ ಆಶೀರ್ವದಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಗಡಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.