ಬೆಳಗಾವಿ :ಕರ್ನಾಟಕದ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪ್ರಭ ಹಾಗೂ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ಸಂಸ್ಥೆ ವತಿಯಿಂದ ವೈದ್ಯಕ್ಷೇತ್ರದಲ್ಲಿನ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ 2023 ಪುರಸ್ಕಾರಕ್ಕೆ ಬೆಳಗಾವಿಯ ಡಾ. ಜಗದೀಶ ಜಿಂಗೆ ಆಯ್ಕೆಯಾಗಿದ್ದು ಜುಲೈ 29ರಂದು ಸಂಜೆ 5:00 ಕ್ಕೆ ಬೆಂಗಳೂರು ದಿ. ಲಲಿತ್ ಅಶೋಕ್ ಹೋಟೆಲ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಕನ್ನಡ ಪ್ರಭ ಹಾಗೂ ಏಷ್ಯಾ ನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅಧ್ಯಕ್ಷತೆ ವಹಿಸುವರು. ಬೆಂಗಳೂರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ ಹಾಗೂ ಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಮಾಡಿದ ಜಗದೀಶ ಜಿಂಗೆ :
ಬೆಳಗಾವಿಯ ಎಫ್ ಎಸ್ ಎಸ್ ಎಐ ಅಧಿಕಾರಿಯಾಗಿರುವ ಜಗದೀಶ ಜಿಂಗೆ ಅವರು ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯ ವಿವಿಧಡೆ ಮಿಂಚಿನ ದಾಳಿ ನಡೆಸಿದ ಅವರು ಜನರಿಗೆ ಉತ್ತಮ ಸೇವೆ ನೀಡುವಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೆಲವರು ಎಫ್ ಎಸ್ ಎಸ್ ಎಐ ಹೆಸರಲ್ಲಿ ಬಡ ಅಂಗಡಿಕಾರರ ಮೇಲೆ ದಾಳಿ ಮಾಡಿದಾಗ ಅಂತವರಿಗೆ ನಿರ್ದಾಕ್ಷಿಣ್ಯವಾಗಿ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಎಂದು ಹೇಳಿಕೊಂಡು ಅಂಗಡಿಗಳ ಮೇಲೆ ದಾಳಿ ನಡೆಸುವವರ ವಿರುದ್ಧ ಎಚ್ಚರಿಕೆ ರವಾನಿಸಿದ್ದರು. ಸಾರ್ವಜನಿಕರು ಇಂಥವರ ಮೇಲೆ ಗಮನಹರಿಸಬೇಕು. ಯಾವುದೇ ದೂರುಗಳು ಬಂದಲ್ಲಿ ಇಲಾಖೆಯನ್ನು ಸಾರ್ವಜನಿಕರು ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದರು. ಯಾವುದೇ ಕಾರಣಕ್ಕೂ ಅಂಗಡಿಗಳ ಮಾಲೀಕರಿಗೆ ನಾವು ಎಫ್ ಎಸ್ ಎಸ್ ಎಐ ಅಧಿಕಾರಿಗಳು ಎಂದು ಹೇಳುವಂತಿಲ್ಲ, ಅಂಗಡಿಕಾರರಿಗೆ ಯಾವುದೇ ಕಾರಣಕ್ಕೆ ಒತ್ತಡ ಹೇರಬಾರದು. ಇಂದೇ ದಂಡ ನೀಡಬೇಕು ಎಂದು ತಾಕೀತು ಮಾಡಬಾರದು ಎಂದು ಸಂಬಂಧಿಸಿದ ಏಜೆನ್ಸಿಗಳಿಗೆ ಸೂಚನೆ ರವಾನಿಸಿ ಅಂಗಡಿಕಾರರು ಹಾಗೂ ಸಾರ್ವಜನಿಕರ ಮನ ಗೆದ್ದಿದ್ದರು.