ಬೆಳಗಾವಿ ಜಿಎ ಪಪೂ ಮಹಾವಿದ್ಯಾಲಯದ ಶಾಲಾ ಒಕ್ಕೂಟ, ವಿವಿಧ ಸಂಘಗಳ ಉದ್ಘಾಟನೆ
ನಮ್ಮ ಪ್ರತಿಭೆಯನ್ನು ಬೇರೆಯವರು ಸದುಪಯೋಗಪಡಿಸಿಕೊಂಡು ಮುಂದೆ ಬರುತ್ತಿದ್ದಾರೆ : ಡಾ.ಹನುಮಂತ ಮೇಲಿನಮನಿ
ಬೆಳಗಾವಿ :ಪ್ರತಿಭೆಗಳು ನಮ್ಮಲ್ಲೇ ಇದೆ. ಆದರೆ ಅದನ್ನು ಕೆಲವರಿಗೆ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿರುವ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಬೇರೆಯವರು ಬಳಸಿಕೊಂಡು ಮುಂದೆ ಬರುತ್ತಿದ್ದಾರೆ. ನಾವು ಮುಂದೆ ಬರುತ್ತಿಲ್ಲ. ನಾವು ಹಿಂದುಳಿಯುತ್ತಿದ್ದೇವೆ ಎಂದು ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಹೇಳಿದರು. ಶುಕ್ರವಾರ ನಗರದ ಕೆಎಲ್ ಇ ಸಂಸ್ಥೆ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢಶಾಲಾ ವಿಭಾಗ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಒಕ್ಕೂಟ ಮತ್ತು ವಿವಿಧ ಸಂಘಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮತ್ತೊಬ್ಬರ ವಿಚಾರ ಇಟ್ಟುಕೊಂಡು ಬದುಕುವ ಬದಲು ನಮ್ಮ ವಿಚಾರ ಇಟ್ಟುಕೊಂಡು ಬದುಕು ಕಲೆ ರೂಢಿಸಿಕೊಳ್ಳಬೇಕು. ಅಂದಾಗ ನಾವು ಮುಂದೆ ಬರಲು ಸಾಧ್ಯವಾಗುತ್ತದೆ. ಪಠ್ಯವನ್ನು ಸ್ವಲ್ಪಮಟ್ಟಿಗೆ ಬದಿಗಿಟ್ಟು ಪಠ್ಯೇತರ ಚಟುವಟಿಕೆಯತ್ತ ಗಮನಹರಿಸಬೇಕು. ಅಂದಾಗ ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳು ಇಂದು ವಿಶೇಷ ಪ್ರತಿಭೆ ತೋರಿಸಿರುವುದು ಸಂತಸದ ಸಂಗತಿ ಎಂದರು. ವಿದ್ಯಾರ್ಥಿಗಳು ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಓದಿನ ಸಮಯದಲ್ಲಿ ಓದಿಗೆ ಗರಿಷ್ಠ ಆದ್ಯತೆ ನೀಡಬೇಕು ಎಂದು ಹಲವು ದೃಷ್ಟಾಂತಗಳ ಮೂಲಕ ಅವರು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಉಪಪ್ರಾಚಾರ್ಯ ಎಸ್.ಆರ್. ಗದಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಆರ್.ಎಂ.ಮಗದುಮ್, ಹಿರಿಯ ಶಿಕ್ಷಕ ಪಿ.ಎಸ್.ನಿಡೋಣಿ, ಎ ಆರ್ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಪತ್ಕುಮಾರ ಪಾಟೀಲ, ಉಷಾ ರಾಠೋಡ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಲ್ಕಾ ಪಾಟೀಲ ಸ್ವಾಗತಿಸಿದರು. ಕೆ.ಆರ್.ಪಟ್ಟಣ ಪರಿಚಯಿಸಿದರು. ಸಿ.ಎಂ.ಪಾಗಾದ ನಿರೂಪಿಸಿದರು. ಎಸ್.ಕೆ.ದೇಸಾಯಿ ವಂದಿಸಿದರು.