ಬೆಳಗಾವಿ :
ಚುಟುಕುಗಳು ಚಿಕ್ಕದಾಗಿದ್ದರೆ ಸಾಲದು, ಅವು ಕಾವ್ಯಲಕ್ಷಣಗಳನ್ನೂ ಹೊಂದಿರಬೇಕಾಗುತ್ತದೆ” ಎಂದು ಖ್ಯಾತ ಚುಟುಕು , ಗಜಲ್ ಕವಿಗಳೂ, ಅರಿವಳಿಕೆ ತಜ್ಞರೂ ಆದ ಡಾ. ಗೋವಿಂದ ಹೆಗಡೆ ಹುಬ್ಬಳ್ಳಿ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚುಟುಕು ವಾಚನ ಸ್ಪರ್ಧೆ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಡಾ. ಗೋವಿಂದ ಹೆಗಡೆಯವರು ಚುಟುಕು ಕಾವ್ಯ ಹಲವು ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ವಚನ, ಸುಭಾಷಿತ, ಮುಕ್ತಕ, ಉರ್ದುವಿನ ಫರ್ದ್, ರುಬಾಬ್, ಜಪಾನಿನ ಹೈಕು, ಇಂಗ್ಲಿಷ್ ನ ಲಿಮೆರಿಕ್, ಎಪಿಗ್ರಂ , ಹನಿಗವನ ಮೊದಲಾದ ಸ್ವರೂಪ ಪಡೆದಿದೆ. ತನಗ ಎನ್ನುವ ಹೊಸ ಪ್ರಕಾರವನ್ನು ಈಚೆಗೆ ನಾನು ಕನ್ನಡದಲ್ಲಿ ಬಳಕೆಗೆ ತಂದಿದ್ದೇನೆ ಎಂದು ಹೇಳಿದರಲ್ಲದೆ ಅವುಗಳನ್ನು ಉದಾಹರಿಸಿ ತೋರಿಸಿದರು.
ಡಾ. ಹೆಡೆಯವರನ್ನು ಚುಸಾಪ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಣ ತಜ್ಞ ಬಿ. ಎಸ್. ಗವಿಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚುಟುಕು ಸಾಹಿತ್ಯ ಪ್ರಕಾರವನ್ನು ಜನಪ್ರಿಯಗೊಳಿಸಿ ಹೊಸ ಕಾವ್ಯಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಚುಟುಕು ಸಾಹಿತ್ಯ ಪರಿಷತ್ತನ್ನು ಅಭಿನಂದಿಸಿದರು. ಕಾರ್ಯಾಧ್ಯಕ್ಷ ಡಾ. ಸಿ. ಕೆ. ಜೋರಾಪುರ ಅಧ್ಯಕ್ಷತೆ ವಹಿಸಿದ್ದರು. ಚುಸಾಪ ಜಿಲ್ಲಾಧ್ಯಕ್ಷ ಎಲ್. ಎಸ್. ಶಾಸ್ತ್ರಿ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಸ್ವಾಗತಿಸಿದರು. ಮಮತಾ ಶಂಕರ ಪರಿಚಯಿಸಿದರು. ಅನ್ನಪೂರ್ಣಾ ಹಿರೇಮಠ ಮತ್ತು ಭಾರತಿ ಮಠದ ನಿರೂಪಿಸಿದರು.
ಜಿಲ್ಲಾ ಮಟ್ಟದ ಚುಟುಕು ವಚನ ಸ್ಪರ್ಧೆಯ ನಿರ್ಣಾಯಕರಾಗಿದ್ದ ಡಾ. ಎಚ್. ಐ. ತಿಮ್ಮಾಪುರ, ಎ. ಎ. ಸನದಿ, ಮತ್ತು ದೀಪಿಕಾ ಚಾಟೆ ಇವರನ್ನು ಸತ್ಕರಿಸಲಾಯಿತು. ಸ್ಪರ್ಧೆಯಲ್ಲಿ ರವಿ ಹಲಕರ್ಣಿ ಪ್ರಥಮ ಸ್ಥಾನ, ಬಿ. ಎಚ್. ಶೀಗೀಹಳ್ಳಿ ದ್ವಿತೀಯ, ಮೈತ್ರೇಯಿಣಿ ಗದಿಗೆಪ್ಪಗೌಡರ ತೃತೀಯ, ಬಸವರಾಜ ಘೋಡಗೇರಿ ಮತ್ತು ಶೈಲಜಾ ತಳವಾರ
ಇವರು ಪ್ರೋತ್ಸಾಹಕ ಬಹುಮಾನ ಪಡೆದರು. ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.