ಬೆಳಗಾವಿ:
ವಚನಗಳು ಕನ್ನಡದ ಅಮೂಲ್ಯ ರತ್ನಗಳು. ಜೀವನದ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಹೇಳಿದವರು ಶರಣರು. ಅವರ ವಚನಗಳನ್ನು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಪಠ್ಯದ ಮೂಲಕ ತಿಳಿಸುವ ಕಾರ್ಯ ಜರುಬೇಕೆಂದು ಬೆಳಗಾವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಗೀತಾ ದಯಣ್ಣವರ ಹೇಳಿದರು.
ಅವರು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಆಶ್ರಯದಲ್ಲಿ ಅಮಾವಾಸ್ಯೆ ಅನುಭಾವ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಶಿಕ್ಷಣದ ಪರಿಕಲ್ಪನೆ ವಿಷಯ ಕುರಿತು ಅನುಭಾವ ನೀಡಿ ಮಾತನಾಡಿದರು.
ಶರಣ ವಚನಗಳು ಸಮಾಜವನ್ನು ಪರಿವರ್ತಿಸುವ ಸಂಜೀವಿನಿಯಾಗಿವೆ ಬೌದ್ಧಿಕ ಹಾಗೂ ಮಾನಸಿಕ ಸ್ವಾಸ್ಥö್ಯವನ್ನು ವಿಕಸನಗೊಳಿಸುವ ಶಕ್ತಿ ವಚನಗಳಲ್ಲಿ ಅಡಗಿದೆ. ಪ್ರತಿ ವಚನಗಳಲ್ಲಿಯೂ ನೈತಿಕ ಶಿಕ್ಷಣ ಹಾಸುಹೊಕ್ಕಾಗಿವೆ. ಇಂದಿನ ಒತ್ತಡದ ಬದುಕಿನಲ್ಲಿ ಮಕ್ಕಳಿಗೆ ನೈತಿಕ ಹಾಗೂ ಸಂಸ್ಕಾರ ಭರಿತವಾದ ಶಿಕ್ಷಣದ ಅವಶ್ಯಕತೆ ಇದೆ. ಪ್ರಾಥಮಿಕ ಹಂತದಿAದ ಸ್ನಾತಕೋತ್ತರ ಹಂತದವರೆಗೆ ವಚನಗಳನ್ನು ಅಳವಡಿಸುವ ಕಾರ್ಯವನ್ನು ಪಠ್ಯಪುಸ್ತಕ ಮಂಡಳಿಯವರು ಮಾಡಲೇಬೇಕು. ಶಿಕ್ಷಣದ ಮೂಲ ಧ್ಯೇಯವೇ ಮಾನವಿಯತೆಯನ್ನು ಬಿತ್ತುವುದು ಹಾಗೂ ಜೀವನದ ಮೌಲ್ಯಗಳನ್ನು ಕಲಿಸುವುದಾಗಿದೆ. ಇಂದು ಯಾಂತ್ರಿಕ ಜೀವನದಿಂದಾಗಿ ಮೌಲ್ಯಗಳು ಕುಸಿಯುತ್ತಿವೆ. ಬಾಲ್ಯಾವಸ್ಥೆಯಲ್ಲಿಯೇ ಉತ್ತಮವಾಗಿ ಸಂಸ್ಕಾರಗಳನ್ನು ನೀಡಿದ್ದೇ ಆದರೆ ಸಮಾಜದಲ್ಲಿ ಸೈದ್ಧಾಂತಿಕ ಬದಲಾವಣೆಗಳನ್ನು ತರಲು ಸಾಧ್ಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ
ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ ಮಹಾಸಭೆಯು ಅನೇಕ ಯುವಪ್ರತಿಭೆಗಳಿಗೆ ವೇದಿಕೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಮಕ್ಕಳಲ್ಲಿ ಜ್ಞಾನದ ಬೀಜವನ್ನು ಬಿತ್ತಿದಾಗ ಮಾತ್ರ ಉತ್ತಮವಾದ ಸಮಾಜವನ್ನು ನಿರ್ಮಿಸಲು ಸಾಧ್ಯ. ವಚನಕಾರರು ತಮ್ಮ ವಚನಗಳಲ್ಲಿ ಅಂತಹ ಜೀವನದ ವಿಧಾನಗಳನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಮಹಾಸಭೆ ಮಕ್ಕಳಿಗಾಗಿ ಹಾಗೂ ಯುವ ಜನತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ರೂಪಿಸುತ್ತಿದೆ. ಎಲ್ಲರೂ ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಶರಣ ಸಾಹಿತ್ಯದಲ್ಲಿ ಬದುಕಿನ ಎಲ್ಲ ಆಯಾಮಗಳು ಮೂಡಿಬಂದಿವೆ. ಅವರು ಜೀವನವನ್ನು ಸ್ವಾನುಭಾವದ ಮೂಲಕ ನಿರೂಪಿಸಿದರು. ಅವರ ವಚನಗಳು ಅನುಭಾವದ ಪುಂಜಗಳಾಗಿವೆ. ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ಹೃದಯಕ್ಕೆ ಮುಟ್ಟುವಂತೆ ವಚನಗಳನ್ನು ರಚಿಸಿದ್ದಾರೆ. ಹೃದಯದ ಕಣ್ಣಿನಿಂದ ಅವುಗಳನ್ನು ಅವಲೋಕಿಸಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆನೀಡಿದರು.
ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಮಾಡಿದರು. ಅಕ್ಕಮಹಾದೇವಿ ತೆಗ್ಗಿ ವಚನ ವಿಶ್ಲೇಷಣೆ ನಡೆಸಿ ಕೊಟ್ಟರು, ಸುಧಾ ಪಾಟೀಲ ಸ್ವಾಗತಿಸಿದರು. ಜ್ಯೋತಿ ಮಾಳಿ ನಿರೂಪಿಸಿದರು. ನ್ಯಾಯವಾದಿ ಶ್ರೀ ವಿ.ಕೆ. ಪಾಟೀಲ್ ವಂದಿಸಿದರು. ಡಾ.ಗುರುದೇವಿ ಹುಲೆಪ್ಪನವರಮಠ, ಪ್ರೊ.ಎ.ಬಿ.ಕೊರಬು, ಪ್ರಸಾದ ಹಿರೇಮಠ, ಗುರುದೇವ ಪಾಟೀಲ, ಡಾ.ಮಹೇಶ ಗುರನಗೌಡರ ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.