ಬೆಳಗಾವಿ: ಈ ಭೂಮಿ ಅಸ್ಥಿತ್ವದಲ್ಲಿ ಇರುವಪರೆಗೂ, ಸೂರ್ಯ, ಚಂದ್ರ ಇರುವವರೆಗೂ ಮಹಾನ್ ಮಾನವತಾ ವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ದಾಂತ ಪ್ರಸ್ತುತ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಭಾನುವಾರ ಸಂಜೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಬಾಳೇಕುಂದ್ರಿ ಖುರ್ದ ಗ್ರಾಮದ ಶಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಇಡೀ ವಿಶ್ವಕ್ಕೆ ಮಾನವೀಯತೆಯ ಸಂದೇಶ ನೀಡಿದವರು ಅವರು. ಭಾರತಕ್ಕೆ ವಿಶ್ವದಲ್ಲೇ ಅತ್ಯುತ್ತಮವಾದ ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಸಂವಿಧಾನದಲ್ಲಿರುವ ಪ್ರತಿಯೊಂದು ಅಂಶವೂ ಸದಾ ಪ್ರಸ್ತುತವಾಗಿರುತ್ತದೆ. ದೇಶಕ್ಕೆ ಅದೊಂದು ಮಾರ್ಗದರ್ಶಿಯಾಗಿದೆ, ದಾರಿದೀಪವಾಗಿದೆ. ಅವರು ಬರೆದ ಸಂವಿಧಾನವನ್ನು ಬದಲಾಯಿಸುವ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂದು ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಲವಾರು ಕಡೆ ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡುವ ಅವಕಾಶ ನನಗೆ ಸಿಕ್ಕಿದೆ. ಅವರ ಹೆಸರಿನಲ್ಲಿ, ಅವರ ಅನುಯಾಯಿಗಳು ಮಾಡಬಯಸಿದ ಎಲ್ಲ ಕೆಲಸಗಳಿಗೂ ನಾನು ಸಹಕಾರ ನೀಡುತ್ತ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಎಲ್ಲರೂ ನನಗೆ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಹಾಗಾಗಿ ಎಲ್ಲ ಮುಖಂಡರಿಗೆ ನಾನು ಸದಾ ಋಣಿಯಾಗಿರುತ್ತೇನೆ. ಮುಂಬರುವ ಚುನಾವಣೆಯಲ್ಲಿ ಸಹ ಇದೇ ಸಹಕಾರ ಇರಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕಲ್ಲಪ್ಪ ರಾಮಚನ್ನವರ, ಅರ್ಜುನ ಕಾಂಬಳೆ ಜೈನೂಲ್ ಕುಡಚಿ, ಮಹಾದೇವಿ ರಾಮಚನ್ನವರ, ಸೈಬಾಜ್ ಶೇಖ್, ಮಂಗಲ ಬಾಗನವರ, ಶಾಂತ ಚಂದಗಡ್ಕರ್, ಹನುಮಂತ ಹನ್ನಿಕೇರಿ, ಮಹೇಶ ತಂಗೆಣ್ಣವರ ಮುಂತಾದವರು ಉಪಸ್ಥಿತರಿದ್ದರು.