ಬೆಂಗಳೂರು:
“ಬಸವಣ್ಣನವರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದು. ಇವರು ಸರ್ವ ಸಮುದಾಯದ ನಾಯಕ. ನಾಡಿನ ಸಾಂಸ್ಕೃತಿಕ, ಸಾಮಾಜಿಕ ನಾಯಕ. ಆದ ಕಾರಣಕ್ಕೆ ನಮ್ಮ ಸರ್ಕಾರ ಇವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಜಾಜಿನಗರದಲ್ಲಿ ಶನಿವಾರ ನಡೆದ ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಹಾನ್ ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಹಿತಿಗಳು ಪುಟಗಟ್ಟಲೆ ಹೇಳುವುದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ನಾಲ್ಕೈದು ಸಾಲಿನಲ್ಲಿ ತಿಳಿಸಿದ ಮಹಾನ್ ನಾಯಕ ಬಸವಣ್ಣನವರು” ಎಂದರು.
“ಅವರ ಒಂದೊಂದು ವಚನವನ್ನಿಟ್ಟುಕೊಂಡು ದಿನಗಟ್ಟಲೆ ಚರ್ಚೆ ಮಾಡಬಹುದು, ಅಷ್ಟು ಅರ್ಥಗರ್ಭಿತವಾಗಿರುತ್ತವೆ. “ದೇಹಕ್ಕೆ ಬಡತನ ಎಂಬುದಿಲ್ಲ, ಮನಸ್ಸಿಗೆ ಬಡತನ” ಎನ್ನುವ ಇವರ ಮಾತು ಸದಾ ನನಗೆ ಸ್ಪೂರ್ತಿ” ಎಂದರು.
“ಬೂದಿ ವಿಭೂತಿಯಾಗುತ್ತದೆ, ಅಕ್ಕಿ ಅಕ್ಷತೆಯಾಗುತ್ತದೆ, ಕೊಬ್ಬರಿ ಪ್ರಸಾದವಾಗುತ್ತದೆ, ಅನ್ನ ನೈವೇದ್ಯವಾಗುತ್ತದೆ.
ಅದೇ ರೀತಿ ರಾಜಕಾರಣಿಯೊಬ್ಬ ಕೊಟ್ಟ ಮಾತು ನೆರವೇರಿಸಿದರೆ ಬದುಕು ಸಾರ್ಥಕ. ಜೊತೆಗೆ ಜನರು ಆತನನ್ನು ಮರೆಯುವುದಿಲ್ಲ” ಎಂದು ಡಿಸಿಎಂ ಹೇಳಿದರು.
“ಕೆಂಪೇಗೌಡರು ಎಲ್ಲಾ ವರ್ಗಗಳಿಗೆ ಬೆಂಗಳೂರು ಕಟ್ಟಿದಂತೆ ಬಸವಣ್ಣನವರು ಎಲ್ಲಾ ವರ್ಗಗಳ ಏಳಿಗೆಗೆ ಸಂದೇಶ ನೀಡಿದರು” ಎಂದರು.
“ಮನುಷ್ಯ ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಮಗೆ ಸಿಕ್ಕಂತಹ ಅವಧಿಯಲ್ಲಿ ಮಾಡುವ ಕೆಲಸಗಳೇ ಶಾಶ್ವತ. ವಿಧಾನಸೌಧದ ಹತ್ತಿರದ ಬಸವೇಶ್ವರ ವೃತ್ತದಲ್ಲಿ ನಿರ್ಮಾಣ ಮಾಡಿರುವ ಬಸವಣ್ಣನವರ ಪ್ರತಿಮೆಯನ್ನು ನೋಡಿದಾಗಲೆಲ್ಲ ಮಾಜಿ ಮೇಯರ್ ಗಂಗಾಬಿಕೆಯವರ ನೆನಪಾಗುತ್ತಿರುತ್ತದೆ. ಐತಿಹಾಸಿಕವಾದ ಕೆಲಸ ಅವರ ಅವಧಿಯಲ್ಲಿ ಮಾಡಿದ್ದಾರೆ. ಅದಕ್ಕೆ ನಾನು ಆಗಾಗ್ಗೆ ಅಭಿನಂದನೆಗಳನ್ನು ತಿಳಿಸುತ್ತಾ ಇರುತ್ತೇನೆ” ಎಂದರು.
“ಬಸವಣ್ಣನವರ ಪುತ್ಥಳಿ ಅನಾವರಣಗೊಂಡ ರಾಜಾಜಿನಗರದ ರಸ್ತೆಯ ಇಂಚಿಂಚೂ ನನಗೆ ಗೊತ್ತು. ಹತ್ತಿರದಲ್ಲಿಯೇ ಇರುವ ಎನ್ ಪಿಎಸ್ ನಲ್ಲಿ 6 ನೇ ತರಗತಿವರೆಗೆ ಓದಿದ್ದೇನೆ. ಸಾಕಷ್ಟು ಜನ ಬಾಲ್ಯ ಕಾಲದ ಸ್ನೇಹಿತರು ಇಲ್ಲಿದ್ದಾರೆ” ಎಂದು ಬಾಲ್ಯಕಾಲದ ನೆನಪನ್ನು ಮೆಲುಕು ಹಾಕಿದರು.
“ಬೆಂಗಳೂರಿನ ಆಡಳಿತ ಸುಧಾರಣೆಯಾಗಬೇಕು ಎಂದು ಐದು ಪಾಲಿಕೆಗಳನ್ನು ರಚಿಸಲಾಗಿದೆ. ಜನರ ಬಳಿಗೆ ಆಡಳಿತ ಹೋಗಬೇಕು ಎಂಬುದು ಇದರ ಉದ್ದೇಶ. ವಿಭಜನೆಗೆ ಸಾಕಷ್ಟು ವಿರೋಧ, ಟೀಕೆ ಎದುರಾಯಿತು. ನಮ್ಮ ಕೆಲಸಗಳು ಭವಿಷ್ಯದಲ್ಲಿ ಉಳಿಯಲಿವೆ ಎನ್ನುವುದು ನನ್ನ ನಂಬಿಕೆ” ಎಂದರು.
“ಅಂತರಾಷ್ಟ್ರೀಯ ನಗರವಾಗಿ ಬೆಂಗಳೂರು ಬೆಳೆಯುತ್ತಿದೆ. ಬೆಂಗಳೂರು ಘನತೆ ಕಾಪಾಡುವ, ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರೂ ಸೇರಿ ಬೆಂಗಳೂರು ಕಟ್ಟೋಣ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಟನಲ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. 43 ಕಿ.ಮೀ ಡಬಲ್ ಡೆಕ್ಕರ್ ನಿರ್ಮಾಣಕ್ಕೆ ಕೈ ಹಾಕಿದ್ದೇವೆ. ಇಡೀ ದೇಶದಲ್ಲಿ ಇಷ್ಟು ದೊಡ್ಡ ಕೆಲಸ ಎಲ್ಲಿಯೂ ಅಗಿಲ್ಲ. 116 ಮೇಲ್ಸೇತುವೆಗಳ ನಿರ್ಮಾಣ, ರಾಜಕಾಲುವೆ ಅಭಿವೃದ್ಧಿ, ಕಸ ನಿರ್ವಹಣೆ, ರಸ್ತೆ ಅಭಿವೃದ್ಧಿ ಹೀಗೆ ನೂರಾರು ಕೆಲಸಗಳು ನಡೆಯುತ್ತಿವೆ” ಎಂದರು.