ಬೆಳಗಾವಿ: ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ನಲ್ಲಿ ಕಳೆದ ಮೂರು ತಿಂಗಳುಗಳ ಕಾಲ 41 ನವಜಾತ ಶಿಶುಗಳು ಮೃತಪಟ್ಟಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈಗಿನ ಕಾಲದಲ್ಲಿ ಒಂದೋ ಅಥವಾ ಎರಡೋ ಮಕ್ಕಳನ್ನು ಹೇರುವುದು ಹರಸಾಹಸ. ಅಂತದ್ದರಲ್ಲಿ ಪರದಾಡುವ ಜನ, ಸರಕಾರಿ ಸೌಲಭ್ಯಕ್ಕೆ ಅತ್ಯಂತ ಕಡಿಮೆ ವೆಚ್ಚಕ್ಕಾಗಿ ಅದರಲ್ಲೂ ಉಚಿತವಾಗಿ ಜಿಲ್ಲಾ ಆಸ್ಪತ್ರೆಗೆ ಮೊರೆ ಹೋಗಿ ಅಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ನವಜಾತ ಶಿಶುಗಳ ಸಾವು ಅಲ್ಲೋಲಕಲ್ಲೋಲವನ್ನು ಉಂಟು ಮಾಡಿದೆ.
ಆದರೆ, ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಹೇಳುವುದೇ ಬೇರೆ. ಬಿಮ್ಸ್ ನಲ್ಲಿ ಕಳೆದ ಮೂರು ತಿಂಗಳುಗಳ ಕಾಲ 41 ನವಜಾತ ಶಿಶುಗಳು ಮೃತಪಟ್ಟಿದ್ದಾರೆ ನಿಜ. ಆದರೆ, ಅದು ಆಕ್ಸಿಜನ್ ಕೊರತೆಯಿಂದ ಅಲ್ಲ. ನಮ್ಮ ಕಂಪ್ರೆಸರ್ ಪದೇಪದೇ ಹಾಳಾಗುತ್ತಿದೆ. ನಮ್ಮಲ್ಲಿರುವ ಆಕ್ಸಿಜನ್ ಟ್ಯಾಂಕ್ ಎಂಸಿಎಚ್ ಬ್ಲಾಕ್ ಪಕ್ಕದಲ್ಲಿ ಇರುವುದರಿಂದ ಆಕ್ಸಿಜನ್ ಸಮಸ್ಯೆ ಇಲ್ಲ. ನವಜಾತ ಶಿಶುಗಳಿಗೆ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕೋ ಅಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸರಬರಾಜು ಆಗುತ್ತಿದೆ. ನಮ್ಮಲ್ಲಿ ಎಲ್ಲಾ ಬೆಡ್ ಗಳು ಪೂರ್ಣ ಇವೆ. ನುರಿತ ತಜ್ಞರು ಇದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹೆಚ್ಚುವರಿ ಕಂಪ್ರೆಸರ್ ಮೂರು ತಿಂಗಳ ಹಿಂದೆ ಹಾಳಾಗಿದ್ದು ಅದನ್ನು ಈಗ ದುರಸ್ತಿ ಮಾಡಿದ್ದೇವೆ. ಈಗ ಮತ್ತೆ 15 ದಿನಗಳ ಹಿಂದೆ ಹಾಳಾಗಿದೆ. ಅದನ್ನು ದುರಸ್ತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಶ್ರೀ ಸಿದ್ದಿವಿನಾಯಕ ಏಜೆನ್ಸಿಗೆ ನೀಡಿದಾದ್ದರು ಏಕೆ ಎಂಬ ಪ್ರಶ್ನೆ ಮೂಡಿದೆ. ಆದರೆ ಶ್ರೀ ವಿನಾಯಕ ಏಜನ್ಸಿಗೆ ಹೊಸ ಕಂಪ್ರೆಸರ್ ನಿರ್ವಹಣೆ ಮಾಡಲು ಅನುಮತಿ ನೀಡಿದ್ದೇವೆ ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ನಾವು ಸಿದ್ಧ ಎನ್ನುತ್ತಾರೆ ಅಶೋಕ ಶೆಟ್ಟಿ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕ ಮಕ್ಕಳ ವಿಶೇಷ ಚಿಕಿತ್ಸೆಯ ಎಚ್ ಒಡಿ ಡಾ.ಶ್ರೀಶೈಲ ಪಾಟೀಲ, 41 ನವಜಾತ ಶಿಶುಗಳು ಮೂರು ತಿಂಗಳಲ್ಲಿ ಮೃತಪಟ್ಟಿದ್ದಾರೆ. ಆದರೆ ಅದು ಕಂಪ್ರೆಸರ್ ನಿಂದ ಅಲ್ಲ. ನಮ್ಮಲ್ಲಿ ನೆರೆಯ ಮಹಾರಾಷ್ಟ್ರದಿಂದಲೂ ಗರ್ಭಿಣಿಯರು ಆಗಮಿಸಿ ಇಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೀರು ಬಿಟ್ಟಿರುವ ಸಿಬ್ಬಂದಿಯನ್ನು ಬೇರೆ ವರ್ಗಾವಣೆ ಮಾಡಲಿ : ಈ ಹಿಂದೆ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿ ಅವರು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಹಿಡಿದ ಗ್ರಹಣವನ್ನು ಬಿಡಿಸಿದ್ದರು. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬೇರು ಬಿಟ್ಟಿದ್ದ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಇಡೀ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದರು. ಇದೀಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬೆಳಗಾವಿ ಬಿಮ್ಸ್ ವ್ಯವಸ್ಥೆಯನ್ನು ಸರಿಪಡಿಸಲು ಅವರು ಕಾಳಜಿ ವಹಿಸಬೇಕು. ಬೆಳಗಾವಿ ಬಿಮ್ಸ್ ನಲ್ಲಿ ಬೇರು ಬಿಟ್ಟಿರುವ ಹಾಗೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಸಾವಿಗೆ ಕಾರಣರಾಗಿರುವ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲೇಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.