ಬೆಂಗಳೂರು: ‘ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಬೆಸಿಲಿಕಾ ಎಂಬುದಾಗಿ ಬದ ಲಾಯಿಸಬಾರದು’ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ವಿ.ಎನ್. ಶಾಮಸುಂದರರಾವ್ ಗಾಯಕವಾಡ್, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಾಜಿನಗರದ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಬೆಸಿಲಿಕಾ ಎಂದು ನಾಮಕರಣ ಮಾಡುವ ಇಚ್ಛೆ ವ್ಯಕ್ತಪಡಿಸಿರುವುದು ಸರಿಯಲ್ಲ. ಇದು ಶಿವಾಜಿ ಮಹಾರಾಜರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಶಿವಾಜಿ ಮಹಾರಾಜರಿಗೂ ಬೆಂಗಳೂರಿಗೂ ಐತಿಹಾಸಿಕ ನಂಟಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಈ ಕ್ಷೇತ್ರವನ್ನು ಸಾರ್ವಜನಿಕರು ಶಿವಾಜಿನಗರ ಎಂದೇ ಗುರುತಿಸುತ್ತಾರೆ. ಆದ್ದರಿಂದ ಶಿವಾಜಿನಗರ ಮೆಟ್ರೊ ನಿಲ್ದಾಣವೆಂದು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.