ದುಬೈ/ವಾಷಿಂಗ್ಟನ್: ಒಪ್ಪಂದ ಮಾಡಿಕೊಳ್ಳಲು ಇರಾನ್ಗೆ ನೀಡಿದ್ದ ಗಡುವು ಸಮೀಪಿಸುತ್ತಿದ್ದಂತೆಯೇ ‘ಇರಾನ್ ನಾಗರಿಕತೆಯನ್ನೇ ವಿನಾಶ ಮಾಡುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ತೈಲ ಘಟಕಗಳಿರುವ ಇರಾನ್ ಖಾರ್ಗ್ ದ್ವೀಪದ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ದಾಳಿ ನಡೆಸಿವೆ.
ಟೆಹರಾನ್ ಹೊರವಲಯದ ವಸತಿಪ್ರದೇಶಗಳನ್ನು ಗುರಿಯಾಗಿಸಿ ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ದಾಳಿಗಳಲ್ಲಿ 18 ಮಂದಿ ಮೃತಪಟ್ಟಿರುವುದಾಗಿ ಇರಾನ್ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ಇರಾನ್ನ ರೆವಲ್ಯೂಷನರಿ ಗಾರ್ಡ್ ಕೋರ್(ಐಆರ್ಜಿಸಿ) ಬಳಸುತ್ತಿದ್ದ ರೈಲು ಮಾರ್ಗ ಹಾಗೂ ಸೇತುವೆಗಳ ಮೇಲೂ ಬಾಂಬ್ ಸ್ಫೋಟಿಸಲಾಗಿದೆ.
ಈ ನಡುವೆ, ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಉದ್ದೇಶದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿದ್ದ ನಿರ್ಣಯಕ್ಕೆ ಸೋಲಾಗಿದೆ. ಮಂಡಳಿಯ ಸದಸ್ಯ ರಾಷ್ಟ್ರಗಳಾದ ರಷ್ಯಾ ಹಾಗೂ ಚೀನಾ ತಮ್ಮ ವಿಟೊ ಅಧಿಕಾರ ಬಳಸಿ, ಈ ನಿರ್ಣಯ ಅಂಗೀಕಾರವಾಗದಂತೆ ನೋಡಿಕೊಂಡವು.
ಒಪ್ಪಂದಕ್ಕೆ ಇರಾನ್ ಸಹಿ ಹಾಕಿ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಸುಧಾರಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಇರಾನ್ ಅನ್ನು ನಾಶ ಮಾಡಲಾಗುವುದು. ಈ ರೀತಿ ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಆದರೆ, ಬಹುಶಃ ಇದು ಘಟಿಸಲಿದೆ’ ಎಂದು ಅವರು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟೂಥ್ ಸೋಷಿಯಲ್’ನಲ್ಲಿ ಬರೆದುಕೊಂಡಿದ್ದಾರೆ.
‘ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಖಾರ್ಗ್ ದ್ವೀಪದ ಮೇಲೆ ನಡೆಸಿದ ದಾಳಿಯಲ್ಲಿ, ಅಲ್ಲಿನ ಮೂಲಸೌಕರ್ಯಗಳಿಗೆ ಯಾವುದೇ ಹಾನಿಯಾಗಿಲ್ಲ’ ಎಂದು ಇರಾನ್ ಹೇಳಿಕೊಂಡಿದೆ.


