ಪಾಟ್ನಾ :
ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಚರ್ಚೆ ತುಸು ಜೋರಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾಗಿರುವ ವಿಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿದೆ.
ಇದೀಗ ಈ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗಾಗಿ ಕಸರತ್ತು ಶುರುವಾಗಿದೆ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಬಾಯ್ಬಿಟ್ಟು ಹೇಳಿಲ್ಲ. ಆದರೆ ತೆರಮರೆಯಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಕಸರತ್ತು ನಡೆಸುತ್ತಿದೆ. ಇತ್ತ ಆಮ್ ಆದ್ಮಿ ಪಾರ್ಟಿ ನಾಯಕರು ಅರವಿಂದ್ ಕೇಜ್ರಿವಾಲ್ ಹೆಸರು ಪ್ರಸ್ತಾಪಿಸಿದ್ದಾರೆ. ಇದರ ನಡುವೆ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಕೆಲ ನಾಯಕರ ಹೆಸರು ಕೇಳಿಬರುತ್ತಿದೆ. ಈ ಪೈಕಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಈ ಬೆಳವಣಿಗೆ ನಡುವೆ ಜೆಡಿಯು ಮಹತ್ವದ ಘೋಷಣೆ ಮಾಡಿದೆ. ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಜೆಡಿಯು ನಾಯಕ ಮಹೇಶ್ವರ ಹಜಾರಿ ಘೋಷಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಕುಮಾರ್ ಮಾತ್ರ ಅರ್ಹರಾಗಿದ್ದಾರೆ. ಇತರೆ ನಾಯಕರಿಗೆ ಹೋಲಿಸಿದರೆ, ಮೋದಿಗೆ ಸರಿಸಮಾನಾಗಿ ನಿಲ್ಲಬಲ್ಲ ಏಕೈಕ ನಾಯಕ ನಿತೀಶ್ ಕುಮಾರ್. ಶೀಘ್ರದಲ್ಲೇ ಇಂಡಿಯಾ ಮೈತ್ರಿಕೂಟ ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿದೆ ಎಂದು ಮಹೇಶ್ವರ್ ಹಜಾರಿ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ನಿತೀಶ್ ಕುಮಾರ್ಗಿಂತ ಉತ್ತಮ ನಾಯಕ ಮತ್ತೊಬ್ಬರಿಲ್ಲ. 18 ವರ್ಷದಿಂದ ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 5 ಬಾರಿ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ರಾಮ್ ಮನೋಹರ್ ಲೋಹಿಯಾ ಅವರ ಬಳಿಕ ಭಾರತದಲ್ಲಿ ನಿಂತಿರುವ ಸಾಮಾಜಿಕ ಹೋರಾಟಗಾರ ಎಂದರೆ ನಿತೀಶ್ ಕುಮಾರ್ ಎಂದು ಮಹೇಶ್ವರ ಹಜಾರಿ ಹೇಳಿದ್ದಾರೆ.
ಜೆಡಿಯು ನಾಯಕನ ಈ ಹೇಳಿಕೆಯಿಂದ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಈ ಹೇಳಿಕೆಯನ್ನು ನಿತೀಶ್ ಕುಮಾರ್ ಅವರೇ ಹೇಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಇಂಡಿಯಾ ಮೈತ್ರಿಕೂಟ ಸಾಮೂಹಿತ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಇಂಡಿಯಾ ಕೂಡದಲ್ಲಿ ಹಲವು ಪ್ರಧಾನಿ ಅಭ್ಯರ್ಥಿ ನಾಯಕರಿದ್ದಾರೆ. ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವೇ ಗುರಿ ಎಂದು ಈಗಾಗಲೇ ಇಂಡಿಯಾ ಕೂಟದ ಸಭೆಗಳಲ್ಲಿ ಪುನರುಚ್ಚರಿಸಲಾಗಿದೆ.
ಇದರ ನಡುವೆ ಜೆಡಿಯು ನಾಯಕರ ಹೇಳಿಕೆ ಇಂಡಿಯಾ ಮೈತ್ರಿಕೂಟದಲ್ಲಿನ ಸಮನ್ವಯ ತಪ್ಪಿಸುವ ಎಲ್ಲಾ ಸಾಧ್ಯತೆಗಳಿವೆ.