ಶಿರಸಿ :
ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಖಾನಾಪುರ ತಾಲೂಕುಗಳನ್ನೊಳಗೊಂಡ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಕ್ಕೆ ಈ ಸಲವು ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅನಂತ ಕುಮಾರ್ ಹೆಗಡೆ ಅವರನ್ನೇ ಪಕ್ಷ ಮತ್ತೆ ಕಣಕ್ಕಿಳಿಸಬಹುದು. ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡುತ್ತಿದ್ದೇವೆ. ಈ ಬಗ್ಗೆ ಪಕ್ಷ ಅಂತಿಮವಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಏಕಶಿಲೆಯಂತೆ ಬಿಜೆಪಿ ಕೆಲಸ ಮಾಡಲಿದೆ. ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸಗಳ ಆಧಾರದಡಿ ಮತಯಾಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಹಲವರು ಆಕಾಂಕ್ಷಿತರಾಗಿದ್ದಾರೆ. ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತದೆ ಅವರ ಗೆಲುವಿಗೆ ಕೆಲಸ ಮಾಡಲಿದ್ದೇವೆ, ಬಿಜೆಪಿಯಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅದು ಯಶಸ್ಸಾಗದು ಎಂದು ತಿಳಿಸಿದರು.
ಅನಾರೋಗ್ಯದ ಕಾರಣದಿಂದ 55 ವರ್ಷದ ಅನಂತಕುಮಾರ್ ಹೆಗಡೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಪಕ್ಷ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ನಡುವೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಈ ಹೇಳಿಕೆ ಮತ್ತೆ ಮಹತ್ವ ಪಡೆದುಕೊಂಡಿದೆ. ಕೆನರಾ ಲೋಕಸಭಾ ಮತಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆ ಕೇಂದ್ರದ ಮಾಜಿ ಸಚಿವರು ಸಹ ಹೌದು. ಕೇಂದ್ರದ ಹಾಲಿ ಸಚಿವ ಪ್ರಲ್ಹಾದ
ಜೋಷಿ ಅವರು ಈ ಬಾರಿ ಉತ್ತರಕನ್ನಡ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಇದೀಗ ಅನಂತ ಕುಮಾರ್ ಹೆಗಡೆ ಅವರ ಹೆಸರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.