ಬೆಂಗಳೂರು :
ಕೇಂದ್ರದ ನರೇಂದ್ರ ಮೋದಿ ಸರಕಾರ ಅತ್ಯಂತ ಮಹತ್ವಾಕಾಂಕ್ಷಿಯ ನಾರಿ ಶಕ್ತಿ ವಂದನ್ ಅಧಿನಿಯಮ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ.
ಇಡೀ ದೇಶದಲ್ಲೆಡೆ ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಹೊಸ ಕಾಯ್ದೆಯಿಂದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಸೌಲಭ್ಯ ಸಿಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಾಸನಸಭೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಲೋಕಸಭೆಗೆ 9 ಮಹಿಳಾ ಸದಸ್ಯರು ಆಯ್ಕೆಯಾಗಲಿದ್ದಾರೆ. ಸದ್ಯ ಕರ್ನಾಟಕದಿಂದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿ ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ, ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವರಾಗಿದ್ದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದಿರುವ ಮಂಗಲಾ ಅಂಗಡಿ ಹಾಗೂ ಮಂಡ್ಯ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ ಬೆಂಬಲದಿಂದ ಆಯ್ಕೆಯಾಗಿ ಇದೀಗ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಚಲನಚಿತ್ರ ನಟ, ಮಾಜಿ ಸಂಸದ ಮತ್ತು ಮಾಜಿ ಸಚಿವರು ಆಗಿರುವ ದಿ. ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಾ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಿರುವುದು ಮಹಿಳಾ ಸದಸ್ಯರ ಪಾಲಿಗೆ ಅತ್ಯಂತ ಸಂತಸದ ಸುದ್ದಿಯಾಗಿದೆ.