ಹಾನಗಲ್ :
ಕಾಂಗ್ರೆಸ್ ಗೆ ಇದು ಕೊನೆ ಚುನಾವಣೆ. ಅವರು ಸೋತರೆ ಅವರು ಸೀದಾ ಮನೆಗೆ ಹೋಗಬೇಕು. ಅವರಿಗೆ ಇದು ಮಾಡು ಇಲ್ಲವೇ ಮಡಿ ಪರಿಸ್ಥಿತಿ. ಆದರೆ ಅವರಿಗೆ ಇದು ಮಡಿಯುವ ಚುನಾವಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು
ಅವರು ಇಂದು ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಈ ಬಾರಿ ಬಿಜೆಪಿ ಸುನಾಮಿ ಕರ್ನಾಟಕದಲ್ಲಿದೆ. ಹಾನಗಲ್ ತಾಲ್ಲೂಕು ಯಾವಾಗಲೂ ರಾಜಕೀಯ ಪ್ರಜ್ಞೆ ಇರುವ ಕ್ಷೇತ್ರ. ಇಲ್ಲಿ ಆರಿಸಿ ಬರುವುದು ಪ್ರಜಾಪ್ರಭುತ್ವದ ಪರೀಕ್ಷೆ. ನಮ್ಮ ಉದಾಸಿ ಅಣ್ಣ ಇದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗ ಇದನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು. ಡಬಲ್ ಎಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆ ನೀಡಿದೆ. ಉದಾಸಿ ಅವರು 2018 ಗೆದ್ದ ಮೇಲೆ ಇಲ್ಲಿನ ಕೆರೆ ತುಂಬಿಸುವಂತೆ ಬಹಳವಾಗಿ ಹೇಳುತ್ತಿದ್ದರು. ಈ ಮೂಲಕ 4 ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಉದಾಸಿ ಅಣ್ಣನ ಋಣ ತೀರಿಸಲು, ಅವರ ಗೌರವ ಎತ್ತಿಹಿಡಿಯಲು ಶಿವರಾಜ್ ಸಜ್ಜನರ್ ಅವರನ್ನು ಗೆಲ್ಲಿಸಿ ತರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ರಾಜ್ಯದಲ್ಲಿ ಉದ್ಯೋಗ ಪರ್ವ ಸೃಷ್ಟಿ ಮಾಡಿದ್ದೇವೆ*
ನಾನು ಸಿಎಂ ಆಗಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಹಾನಗಲ್ ತಾಲೂಕಿನಲ್ಲಿ 8 ಸಾವಿರ ರೈತರ ಮಕ್ಕಳಿಗೆ ವಿದ್ಯಾನಿಧಿ ಸಿಕ್ಕಿದೆ. ನಮ್ಮ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಲಕ್ಷ ರೈತರಿಗೆ 16000 ಕೋಟಿ ರೂ. ನೇರ ಹಣ ವರ್ಗಾವಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೊಜನೆ ಅಡಿಯಲ್ಲಿ ಎಲ್ಲ ಬಡವರಿಗೂ ಸೂರು ಕಲ್ಪಿಸಲಾಗುತ್ತಿದೆ. ಅವರಿಗೆ ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತ್ ನೀಡಲಾಗಿದೆ. ನಾನು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಇದರಿಂದ ರೈತರ ಮಕ್ಕಳು ಉನ್ನತ ಶಿಕ್ಷಣ ಕಲಿತು ಅಧಿಕಾರಿಗಳಾಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಇದರೊಂದಿಗೆ ಅನೇಕ ಇತರೆ ಯೋಜನೆಗಳನ್ನೂ ಜಾರಿಗೆ ತಂದಿದ್ದೀವಿ. ನಾವು ದುಡಿಮೆಗೆ ಬೆಲೆ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಪ್ರತಿ ವರ್ಷ 13 ಲಕ್ಷ ಉದ್ಯೊಗ ಸೃಷ್ಟಿ ಆಗಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ನಮ್ಮ ಕೊಡುಗೆಯನ್ನೇ ಅವರ ಪ್ರಣಾಳಿಕೆಯಲ್ಲಿ ಹಾಕಿದ್ದಾರೆ*
ಕಾಂಗ್ರೆಸ್ ನಾಯಕರು ಸಾಮಾಜಿಕ ನ್ಯಾಯ ಅಂತ ಹೇಳುತ್ತ ಜನರನ್ನು ಬಾವಿಯಲ್ಲಿ ಇಟ್ಟಿದ್ದಾರೆ. ಚುನಾವಣೆ ಬಂದಾಗಷ್ಟೇ ಅವರನ್ನು ಬಾವಿಯಿಂದ ಮೇಲೆತ್ತಿ ಮತ ಹಾಕಿಸಿಕೊಂಡು ಮತ್ತೆ ಬಾವಿಗೆ ಹಾಕುತ್ತಾರೆ. ನಿಮ್ಮ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಅಂತ ಹೇಳಿದ್ದರು. ನಾನು ಜೇನು ಗೂಡಿಗೆ ಕೈ ಹಾಕಿ ಅವರಿಗೆ ಜೇನು ತಿನ್ನಿಸಿದ್ದೇನೆ. ಕಾಂಗ್ರೆಸ್ ನವರು ಈಗ ಮೀಸಲಾತಿ ವಿಚಾರವನ್ನು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ಮನೆಮನೆಗೂ ನೀರು ಕೊಡುತ್ತೇವೆ ಎಂದು ಈಗ ಹೇಳುತ್ತಿದ್ದಾರೆ. 3 ವರ್ಷದಲ್ಲಿ ಈಗಾಗಲೇ 40 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸೌಲಭ್ಯ ನಾವು ಕೊಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಕಾಂಗ್ರೆಸ್ ಕಾಲದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಇತ್ತು*
ಭಾರತ ಈಗ ಸುರಕ್ಷಿತ ದೇಶ ಆಗಿದೆ. ಯುಪಿಎ ಅವಧಿಯಲ್ಲಿ ಪ್ರತಿ ದಿನ ಬಾಂಬ್ ದಾಳಿ ಆಗುತ್ತಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಅತಿ ಹೆಚ್ಚು ಕೋಮುಗಲಭೆ, ರೈತರ ಆತ್ಮಹತ್ಯೆ, ರೇಪ್ ಕೇಸ್ ಗಳು ಹೆಚ್ಚಾಗಿದ್ದವು. ನಮ್ಮ ಪ್ರಧಾನಿ ದೇಶವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಅಮೇರಿಕಾದಲ್ಲಿ ಈಗಲೂ ಕೊರೋನಾ ಭಯದಲ್ಲಿ ಮಾಸ್ಕ್ ಹಾಕುತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿಗಳು ಸಂಪೂರ್ಣವಾಗಿ ಕೋವಿಡ್ ನಿಯಂತ್ರಿಸಿ ಎಲ್ಲರಿಗೂ ಲಸಿಕೆ ಹಾಕಿಸಿದ್ದಾರೆ. ಅವರ ಅವಧಿಯಲ್ಲಿ ಎಲ್ಲ ರಂಗದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಕಾಂಗ್ರೆಸ್ ನವರು ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಗ್ಯಾರೆಂಟಿ ಇಲ್ಲದ ಕಾರಣ ಅವರು ಗ್ಯಾರೆಂಟಿ ಕಾರ್ಡ್ ಕೊಡುತ್ತಿದ್ದಾರೆ. ಮೇ 10ರ ವರೆಗೂ ಮಾತ್ರ ಗ್ಯಾರೆಂಟಿ ಆ ಮೇಲೆ ಗಳಗಂಟಿ. ನಾವು ಮಾಡಿರುವ ಡಬಲ್ ಎಂಜಿನ್ ಸರ್ಕಾರದ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸಿ, ಹೆಚ್ಚಿನ ಮತಗಳಿಂದ ಅರಿಸಿ ತನ್ನಿ ಎಂದು ಹೇಳಿದ ಸಿಎಂ ಬೊಮ್ಮಾಯಿ ಭಜರಂಗಿ ಭಜರಂಗಿ ಎಂದು ಘೋಷಣೆ ಕೂಗಿದರು.