ಬೆಂಗಳೂರು :
ಬೆಳಗಾವಿಯಲ್ಲಿ ಸೋಮವಾರ ಗೋಕಾಕ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ ಎಂದಿನಂತೆ ಆಕ್ರಮಣಕಾರಿಯಾಗಿ ವಾಗ್ದಾಳಿ ನಡೆಸಿದ್ದರು. ಇದನ್ನು ಖಂಡಿಸಿ ಡಿಕೆಶಿ ಬೆಂಬಲಿಗರು ಸೋಮವಾರ ತಡರಾತ್ರಿ ರಮೇಶ ಜಾರಕಿಹೊಳಿ ಅವರ ಬೆಂಗಳೂರು ಮನೆ ಎದುರು ಪ್ರತಿಭಟನೆ ನಡೆಸಿ ಪೋಸ್ಟರ್ ಅಂಟಿಸಿದ್ದಾರೆ.
ಸದಾಶಿವನಗರದಲ್ಲಿರುವ ರಮೇಶ ಜಾರಕಿಹೊಳಿ ನಿವಾಸದ ಬಳಿ ನುಗ್ಗಿ ಪೋಸ್ಟರ್ ಹಾಕಿದ್ದು, ಮನೆ ಗೋಡೆಗಳಿಗೆ ಅವಾಚ್ಯ ಬರಹಗಳಿರುವ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಮನೆಯ ಹಿಂಭಾಗದಲ್ಲೇ ಇರುವ ರಮೇಶ್ ಜಾರಕಿಹೊಳಿ ಮನೆ ಗೋಡೆಗಳಿಗೆ ಅಶ್ಲೀಲ ಬರಹಗಳಿರುವ ಪೋಸ್ಟರ್ ಅಂಟಿಸಿದ್ದಾರೆ. ಕೆಲವೊಂದು ಉಲ್ಲೇಖಿಸಲಾಗದ ಪದಗಳ ಜತೆಗೆ ಇದೇ ನಿನ್ನ ಸಂಸ್ಕೃತಿ ಅಂತೆಲ್ಲಾ ಪೋಸ್ಟರ್ಗಳಲ್ಲಿ ಬರೆಯಲಾಗಿದೆ. ರಮೇಶ್ ಜಾರಕಿಹೊಳಿ ಮನೆ ಗೋಡೆಗೆ ಅಶ್ಲೀಲ ಬರಹಗಳ ಪೋಸ್ಟರ್ ಅಂಟಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಕೂಡಲೇ ಪೋಸ್ಟರ್ಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೋಸ್ಟರ್ ಗಳನ್ನು ತೆರವುಗೊಳಿಸಿದ್ದಾರೆ. ಈಗ ಜಾರಕಿಹೊಳಿಯವರ ಮನೆಗೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿದೆ.
ಡಿ.ಕೆ. ಶಿವಕುಮಾರ ಅವರು ಸದ್ಯದಲ್ಲೇ ಮಾಜಿ ಮಂತ್ರಿ ಆಗಲಿದ್ದಾರೆ. ಡಿಕೆಶಿ ಸಿಡಿ ಮಾಸ್ಟರ್ , ಪುಕ್ಕಲ, ಮೋಸಗಾರ ಎಂದು ರಮೇಶ ಜಾರಕಿಹೊಳಿ ಟೀಕೆ ಮಾಡಿದ್ದರು. ಇದನ್ನು ಖಂಡಿಸಿ ಡಿ.ಕೆ.ಶಿವಕುಮಾರ ಅಭಿಮಾನಿಗಳು ಪೋಸ್ಟರ್ ಅಂಟಿಸಿದ್ದಾರೆ ಎನ್ನಲಾಗಿದೆ.