ಬೆಂಗಳೂರು : ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಆರಾಧ್ಯ ಧೈವ, ಪೂಜ್ಯ ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯಪಾಲರಾದ ಥಾವರಚಂದ್ ಗೆಹಲೋಟ್ ಅವರು ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಿಎo ಸಿದ್ದರಾಮಯ್ಯ ಅವರ ಜತೆ ಡಾ. ಜಿ.ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್ ಖಾನ್ ಅವರು ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
‘ಡಿ.ಕೆ ಶಿವಕುಮಾರ್ ಎಂಬ ಹೆಸರಿನವನಾದ ನಾನು, ಕಾನೂನು ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನ ವಿಷಯದಲ್ಲಿ ನಿಜವಾದ ಶ್ರದ್ಧೆ ಹಾಗೂ ನಿಷ್ಠೆ ಹೊಂದಿರುತ್ತೇನೆ. ಭಾರತದ ಸಾರ್ವಭೌಮತೆ ಹಾಗೂ ಅಖಂಡತೆಯನ್ನು ಎತ್ತಿಹಿಡಿಯುತ್ತೇನೆ. ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣದಿಂದ ನಿರ್ವಹಿಸುತ್ತೇನೆ. ಭಯ ಅಥವಾ ಪಕ್ಷಪಾತವಿಲ್ಲದೇ, ರಾಗ ಅಥವಾ ದ್ವೇಷವಿಲ್ಲದೇ, ಎಲ್ಲ ಬಗೆಯ ಜನರಿಗೆ ಸಂವಿಧಾನ ಹಾಗೂ ಕಾನೂನಿಗೆ ಅನುಸಾರವಾಗಿ ನ್ಯಾಯುತವಾಗಿ ಕೆಲಸ ಮಾಡುತ್ತೇನೆ ಎಂದು ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಶ್ರದ್ಧಾಪೂರ್ವಕವಾಗಿ ಧೃಡೀಕರಣ ಮಾಡುತ್ತೇನೆ ಎಂದರು.
ಡಿ.ಕೆ ಶಿವಕುಮಾರ್ ಎಂಬ ಹೆಸರಿನವನಾದ ನಾನು, ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ನನ್ನ ಪರ್ಯಾಲೋಚನೆಗೆ ತರಲಾಗುವು ಅಥವಾ ತಿಳಿದುಬರುವ ಯಾವುದೇ ವಿಷಯವನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳ ಯುಕ್ತ ನಿರ್ವಹಣೆಗೆ ಅಗತ್ಯವಾಗಬಹುದಾದ ಸಂದರ್ಭದಲ್ಲಲ್ಲದೇ ಯಾವುದೇ ವ್ಯಕ್ತಿಗೆ ಅಥವಾ ವ್ಯಕ್ತಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಿಳಿಸುವುದಿಲ್ಲ ಅಥವಾ ಬಹಿರಂಗಪಡಿಸುವುದಿಲ್ಲ ಎಂದು ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ. ಶ್ರದ್ಧಾಪೂರ್ವಕವಾಗಿ ಧೃಡೀಕರಣ ಮಾಡುತ್ತೇನೆ’ ಎಂದು ಪ್ರಮಾಣವಚನ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎನ್ ಸಿಪಿ ನಾಯಕ ಶರದ್ ಪರವಾರ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಛತ್ತೀಸಗಡ ಮುಖ್ಯಮಂತ್ರಿ ಭೂಪೇಂದ್ರ ಭಘೇಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲೀನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೇನ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು, ರಾಜ್ಯಸಭೆ ಸದಸ್ಯ ಫಾರೂಕ್ ಅಬ್ದುಲ್ಲಾ ಖ್ಯಾತ ನಟ ಕಮಲ್ ಹಾಸನ್, ನಟ ಶಿವರಾಜ ಕುಮಾರ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.