ಬೆಂಗಳೂರು:
“ಇಂಡಿಯಾ” ಒಗ್ಗೂಡುತ್ತಿದೆ, ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಬದಲಾವಣೆಯ ಪರ್ವ ಕರ್ನಾಟಕದಿಂದ ಪ್ರಾರಂಭವಾಗಿದ್ದು, ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದವಿರಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.
ನಗರದ ಲಿಂಗರಾಜಪುರಂನಲ್ಲಿ ಕೇರಳ ಸಮಾಜ ಕರ್ನಾಟಕ ಘಟಕ ಹಮ್ಮಿಕೊಂಡಿದ್ದ ಓಣಕಾಯಿಚಗಳ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿರುವ ಕಾಂಗ್ರೆಸ್ ಸರ್ಕಾರದ ಸಾಧನೆಯಿಂದ, ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುತ್ತಿದೆ” ಎಂದು ಹೇಳಿದರು.
“ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಆಯ್ಕೆಯಾಗಲು ಕೇರಳಿಗರ ಕೊಡುಗೆಯೂ ಇದೆ. ಕೋಮುವಾದಿಗಳ ವಿರುದ್ದದ ಹೋರಾಟಕ್ಕೆ ಕೇರಳಿಗರು ನಮಗೆ ಮಾದರಿ” ಎಂದು ಅಭಿನಂದನೆ ತಿಳಿಸಿದರು.
“ಮಲೆಯಾಳಂ ಭಾಷಿಕರು ಶ್ರಮ ಜೀವಿಗಳು, ಪ್ರಾಮಾಣಿಕವಾಗಿ ದುಡಿಯುವವರು, ಜಾತ್ಯಾತೀತ ಮನಸ್ಸಿನವರು ಹಾಗೂ ಕೊರೋನಾ ಸಂದರ್ಭದಲ್ಲಿ ಕೇರಳ ಸಮಾಜಗಳ ಸಹಾಯವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮರೆಯುವುದಿಲ್ಲ” ಎಂದರು.
“ಶಾಂತಿನಗರದ ಶಾಸಕರಾದ ಹ್ಯಾರಿಸ್ ಅವರು ಸತತ ನಾಲ್ಕನೇ ಬಾರಿಗೆ ಗೆದ್ದು ಸೋಲಿಲ್ಲದ ಸರದಾರರಾಗಿದ್ದಾರೆ. ಕೊರೊನಾ ಸಮಯದಲ್ಲಿ ಕೇರಳ ಸ್ನೇಹಿತರ ಜೊತೆ ಮಾತನಾಡಿ ಕಾಂಗ್ರೆಸ್ ಪಕ್ಷದ ಮೂಲಕ ಜನರ ಜೀವ ಉಳಿಸಿದ ನಿಮ್ಮ ಶಾಸಕರ ಕೆಲಸ ಶ್ಲಾಘನೀಯ ಅದಕ್ಕೆ ನಾವು ಋಣಿಯಾಗಿದ್ದೇವೆ” ಎಂದು ಹೇಳಿದರು.