ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ತುಟ್ಟಿಭತ್ಯೆ ದರವನ್ನು ಶೇ.12.25ರಿಂದ 14.25ರಷ್ಟು ಪರಿಷ್ಕರಿಸಿ ಸರ್ಕಾರ ಆದೇಶಿಸಿದ್ದು, ಈ ಬಗ್ಗೆ ಸರ್ಕಾರದ ಆರ್ಥಿಕ ಇಲಾಖೆಯ (ಸೇವೆಗಳು-2) ಜಂಟಿ ಕಾರ್ಯದರ್ಶಿ ಉಮಾ ಕೆ. ಅವರು ಆದೇಶ ಹೊರಡಿಸಿದ್ದಾರೆ.
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 12.25 ರಿಂದ ಶೇಕಡ 14.25 ಗೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶೇ.2ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದರು. ಇದೀಗ ಆರ್ಥಿಕ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಬೆನ್ನಲ್ಲೇ ಸಾಮಾನ್ಯವಾಗಿ ರಾಜ್ಯ ಸರ್ಕಾರವೂ ಏರಿಕೆ ಮಾಡುತ್ತದೆ. ವಿಜಯದಶಮಿಯ ಮುನ್ನಾ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹೆಚ್ಚುವರಿ 3% ತುಟ್ಟಿ ಭತ್ಯೆ ನೀಡಲು ಅನುಮೋದನೆ ನೀಡಿತ್ತು.
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ; ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ಸರ್ಕಾರ
