ಬೆಳಗಾವಿ : ಪ್ರಾಸಿಕ್ಯೂಷನ್ ಅನುಮತಿಯನ್ನು ವಿರೋಧಿಸಿ ಸಾಂವಿಧಾನಿಕ ಹುದ್ದೆಯಲ್ಲಿರುವ ಘನತೆವೆತ್ತ ರಾಜ್ಯಪಾಲರನ್ನು ಅವಮಾನಿಸಿದ ಕಾಂಗ್ರೆಸ್ಸಿಗರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಬಹೈಕೋರ್ಟ್ ತೀರ್ಪು ಮುಖಭಂಗ ಉಂಟುಮಾಡಿತ್ತು. ಅದು ನೆನಪಿದೆ ಅಲ್ಲವೇ ಸಿದ್ದರಾಮಯ್ಯನವರೇ? ದೇಶದ ಹೆಸರಾಂತ ಕಾನೂನು ಪಂಡಿತ ಹಿರಿಯ ವಕೀಲರುಗಳೇ ದೆಹಲಿಯಿಂದ ಬಂದು ಸಿದ್ದರಾಮಯ್ಯನವರ ಪರವಾಗಿ ಸುದೀರ್ಘವಾದ ಮಂಡಿಸಿದರೂ “ಮುಖ್ಯಮಂತ್ರಿಗಳ ಸ್ವಜನ ಪಕ್ಷಪಾತ ಹಾಗೂ ಪ್ರಭಾವ ಇರುವ ಆರೋಪವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಕ್ರಮಬದ್ಧವಾಗಿದೆ”ಎಂದು ಹೈಕೋರ್ಟ್ ತೀರ್ಪು ನೀಡಿದ್ದು ನಿಮಗೆ ಮರೆತರೂ ಜನರಿಗೆ ಮರೆತಿಲ್ಲ ಮಾನ್ಯ ಮುಖ್ಯಮಂತ್ರಿಗಳೇ… ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಕುಟುಂಬ ಪಡೆದುಕೊಂಡ 14 ನಿವೇಶನಗಳಲ್ಲಿ ಮುಡಾಕ್ಕೆ ರೂ 56 ಕೋಟಿ ಗಳಷ್ಟು
ನಷ್ಟವಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ್ದನ್ನು ನೆನಪಿಸಿಕೊಳ್ಳಿ ಮಾನ್ಯ
ಮುಖ್ಯಮಂತ್ರಿಗಳೇ.. ಇದರ ಬೆನ್ನು ಹತ್ತಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಮುಡಾದಲ್ಲಿ ನಡೆದಿರುವ
ನಿವೇಶನಗಳ ಲೂಟಿ, ಸಾವಿರಾರು ಕೋಟಿ ರೂಪಾಯಿಗಳ ನಷ್ಟ, ಹಾಗೂ ಅಕ್ರಮ ಹಣ ವರ್ಗಾವಣೆ
ಹಗರಣದ ಕುರಿತ ತನಿಖೆಯಲ್ಲಿ ಮುಖ್ಯಮಂತ್ರಿಗಳ ಹಸ್ತಕ್ಷೇಪವಿರುವ ಆರೋಪದಲ್ಲಿಯೂ
ಸತ್ಯಾಂಶವಿದೆಯೆಂಬ ಅಂಶಗಳನ್ನು ವಿವರಿಸಿ ಮಹತ್ವದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಸದ್ಯ ಸುಮಾರು 300 ಕೋಟಿ ರೂ.ಮಾರುಕಟ್ಟೆ ಮೌಲ್ಯದ 142 ಸ್ಥಿರಾಸ್ತಿಗಳನ್ನು ಕಾಯ್ದೆಯನುಸಾರ
ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಇ.ಡಿ. ಘೋಷಿಸಿದೆ, ಹಗರಣದ ಆಳ-ಅಗಲ ದೊಡ್ಡದಾಗಿರುವ
ಹಿನ್ನೆಲೆಯಲ್ಲಿ ತನಿಖೆಯು ಮುಂದುವರೆದಿರುವುದಾಗಿ ಇಡಿ ಹೇಳಿದೆ. ತಮ್ಮ ವಿರುದ್ಧ ಹೈಕೋರ್ಟ್ ತೀರ್ಪು ಹೊರಬಂದಾಗಲೇ ಕರ್ನಾಟಕದ ಘನತೆಯನ್ನು ಪ್ರತಿನಿಧಿಸುವ
ಮುಖ್ಯಮಂತ್ರಿ ಸ್ಥಾನದ ಗೌರವ ಉಳಿಸಲು ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ
ನೀಡಬೇಕಾಗಿತ್ತು, ಆದರೆ ‘ನೈತಿಕತೆ’ ಎಂಬುದು ಸಂಬಂಧವೇ ಇಲ್ಲದಂತೆ ಮೈಗೆ ಎಣ್ಣೆ ಹಚ್ಚಿಕೊಂಡವರ
ರೀತಿ ವರ್ತಿಸುತ್ತಿರುವ ಸಿದ್ದರಾಮಯ್ಯನವರು ಭಂಡತನದ ಪರಮಾವಧಿ ಮೆರೆದು ಮುಖ್ಯಮಂತ್ರಿ
ಸ್ಥಾನದಲ್ಲಿ ಮುಂದುವರೆದಿದ್ದಾರೆ. ಹೈಕೋರ್ಟಿನಲ್ಲಿ ಸಿಬಿಐ ಕೋರಿಕೆಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಿರ್ಣಾಯಕ ಹಂತ ತಲುಪಿರುವ
ಈ ಸಮಯದಲ್ಲೇ ಇಡಿ ಹಗರಣದ ಹೂರಣ ಬಯಲು ಮಾಡಿದೆ, ಸದ್ಯ ಈಗಾಗಲೇ 14 ಅಕ್ರಮ
ನಿವೇಶನಗಳನ್ನು ಮುಡಾಗೆ ಬೇಷರತ್ ಹಿಂದಿರುಗಿಸಿರುವ ಸಿದ್ದರಾಮಯ್ಯನವರು ಆ ಮೂಲಕ ತಮ್ಮ
ಸ್ವಜನಪಕ್ಷಪಾತ ಹಾಗೂ ಭ್ರಷ್ಟತೆಯನ್ನು ಒಪ್ಪಿಕೊಂಡಿದ್ದಾರೆ.ಮಾನ್ಯ ಮುಖ್ಯಮಂತ್ರಿಗಳೇ, ಮುಡಾ ವ್ಯೂಹದಿಂದ ಹೊರಬರಲು ಪ್ರಾರಂಭಿಕ ಹಂತದಲ್ಲಿ ನಿಮಗೆ ಮುಕ್ತ
ಅವಕಾಶವಿತ್ತು, ಆದರೆ ಅದನ್ನು ಬದಿಗೊತ್ತಿ ವಿತಂಡವಾದ ಮೆರೆದಿರಿ, ಈಗಲೂ ಕನಿಷ್ಠ ನೈತಿಕತೆಯನ್ನು
ಉಳಿಸಿಕೊಳ್ಳಲು ಕೊನೆ ಅವಕಾಶ ನಿಮಗಿದೆ, ನೀವು ರಾಜೀನಾಮೆ ನೀಡಿ ಕರ್ನಾಟಕದ ಗೌರವವನ್ನು
ಕನಿಷ್ಠವಾದರೂ ಉಳಿಸುವ ಕೊನೆ ಅವಕಾಶ ಕಳೆದುಕೊಳ್ಳಬೇಡಿ, ಇದು ರಾಜಕೀಯ ದ್ವೇಷವಿಲ್ಲದ ನನ್ನ
ಕಾಳಜಿಯ ಸಲಹೆ, ಸ್ವೀಕರಿಸುವುದು ಅಥವಾ ಧಿಕ್ಕರಿಸುವುದು ನಿಮಗೇ ಬಿಟ್ಟಿದ್ದು.
ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ. ಸುರ್ಜೇವಾಲಾ ಅವರು ಇ.ಡಿ., ಸಿಬಿಐ ಕೇಂದ್ರ
ಸರಕಾರದ ಏಜೆಂಟರಂತಿವೆ ಎನ್ನದೇ ಬೇರೇನು ಹೇಳಲು ಸಾಧ್ಯ? ಭ್ರಷ್ಟಾಚಾರದ ಪಿತಾಮಹನಂತಿರುವ
ಪಕ್ಷ ಕಾಂಗ್ರೆಸ್, ಹೈಕಮಾಂಡಿಗೆ ಬರುವ ಕಪ್ಪ ಕಾಣಿಕೆ ಬಂದರೆ ಇವರು ಇನ್ನೇನು ಹೇಳಲು ಸಾಧ್ಯ?
ಮಾತೆತ್ತಿದರೆ ತಾನೊಬ್ಬ ಪ್ರಾಮಾಣಿಕ ಎಂದು ಸ್ವಬಣ್ಣಿಸಿಕೊಳ್ಳುವ ಭ್ರಷ್ಟ ನಾಲಿಗೆಯ ಸಿದ್ದರಾಮಯ್ಯನವರ
ಪರ ಅವರ ಭಟ್ಟಂಗಿ ಹಿಂಬಾಲಕರು ಬಿಟ್ಟರೆ ಅವರನ್ನು ಸಮರ್ಥಿಸುವವರು ರಾಜ್ಯದಲ್ಲಿ ಯಾರೊಬ್ಬರೂ
ಇಲ್ಲ. ಅಷ್ಟೇ ಏಕೆ ಅವರ ಸ್ಥಾನ ತೆರೆವಿಗಾಗಿ ಕಾದು ಕುಳಿತಿರುವ ಕಾಂಗ್ರೆಸ್ ಪಕ್ಷದಲ್ಲಿಯೂ ಇಲ್ಲ
ಎನ್ನುವುದು ಕಟು ವಾಸ್ತವ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.