ಬೆಳಗಾವಿ :
ಜನನ-ಮರಣ ನೋಂದಣಿ ಕಾರ್ಯ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ನೋಂದಣಿ ಕಾರ್ಯದಲ್ಲಿ ವಿಳಂಬವಾದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜನನ-ಮರಣ ಪ್ರಮಾಣ ಪತ್ರಗಳು ಅತೀ ಪ್ರಮುಖ ದಾಖಲೆಗಳಾಗಿದ್ದು, ಇವುಗಳ ಕುರಿತು ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು. ನೋಂದಣಿಗಾಗಿ ನಿಯೋಜಿತ ನೋಂದಣಾಧಿಕಾರಿಗಳು ನಿಗದಿಪಡಸಲಾದ ತಂತ್ರಾಂಶದಲ್ಲಿ ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು.
ಜನನ-ಮರಣ ನೋಂದಣಿ ವೈಯಕ್ತಿಕ ಅನುಕೂಲಗಳಿಗಾಗಿ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸುರಕ್ಷತೆಯನ್ನೂ ಒದಗಿಸಲು ಅತೀ ಪ್ರಮುಖವಾದ ದಾಖಲೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗಾಗಿಯೇ ದಾಖಲಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಜನನ-ಮರಣ ನೋಂದಣಿಯನ್ನು ಕಾಲ ಮಿತಿಯೊಳಗೆ ದಾಖಲಿಸಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತಹಶೀಲ್ದಾರರು ಪ್ರತಿ ಮಾಹೆ ಸಭೆ ಜರುಗಿಸಿ ಸಭೆಯ ವರದಿಯನ್ನು ಜಿಲ್ಲಾಡಳಿತಕ್ಕೆ ತಪ್ಪದೇ ಸಲ್ಲಿಸಬೇಕು. ಹಾಗೂ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆಗೆ ನಿಯಮಿತವಾಗಿ ಸಮನ್ವಯ ಸಾಧಿಸಿ ನೋಂದಣಿ ಕಾರ್ಯಗಳನ್ನು ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.
ಜನನ-ಮರಣ ನೋಂದಣಿ/ಉಪನೋಂದಣಿ/ಖಾಸಗಿ ಆಸ್ಪತ್ರೆಗಳಲ್ಲಿ ಜನನ-ಮರಣ ಧೃಡೀಕರಣಗಳನ್ನು ನೀಡಲು ನಾಗರೀಕರ ಕೈಯಿಂದ ನೇರವಾಗಿ ಹಣ ಪಡೆಯಲಾಗುತ್ತಿದೆ. ಇದನ್ನು ನಿಗದಿತ ದಿನಾಂಕದೊಳಗಾಗಿ ಸರ್ಕಾರಕ್ಕೆ ತುಂಬಬೇಕು. ಸರ್ಕಾರ ನಿಗದಿ ಪಡಿಸಿದ ಹಣವನ್ನು ಮಾತ್ರವೇ ನೋಂದಣಿ/ಉಪನೋಂದಣಿ/ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೋಣಿ ಅವರು, ಜಿಲ್ಲೆಯಲ್ಲಿ ಇರುವ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತರುಗಳಿಗೆ ಹಾಗೂ ವೈದ್ಯಾಧಿಕಾರಿಗಳು ಪಿ.ಹೆಚ್.ಸಿ. ರವರಿಗೆ ಜನನ ಮತ್ತು ಮರಣ ನೋಂದಣಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ೧೦೦% ಪ್ರತಿಶತ ಗುರಿ ಸಾಧಿಸಲು ನಿರ್ದೇಶನ ನೀಡಿದರು.
ಬೆಳಗಾವಿ ಜಿಲ್ಲೆ ವ್ಯಾಪ್ತಿಗೆ ಬರುವ ಎಲ್ಲಾ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಎಲ್ಲಾ ವಾರ್ಡನಲ್ಲಿö್ಲ ಜನನ-ಮರಣ ನೋಂದಣಿ ಕುರಿತು ನಮೂನೆ-೧ ಮತ್ತು ನಮೂನೆ-೨ (ರ) ಮಾಹಿತಿಗೆ ಸಂಗ್ರಹಿಸಿಬೇಕಾದ ೧೧ ದಾಖಲೆಗಳ ವಿವರಸಹಿತ ಪ್ರತಿಗಳನ್ನು ಪ್ರತಿ ಕೊಠಡಿಗಳ ಗೊಡೆ ಮೇಲೆ ಅಂಟಿಸಲು ಸೂಚನೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ರೇಖಾ.ಬಿ.ಶೆಟ್ಟರ್ ಮಾತನಾಡಿ, ಸನ್ಮಾನ್ಯ ಮುಖ್ಯಮಂತ್ರಿಗಳು ೨೦೧೪-೧೫ ನೇ ಸಾಲಿನ ತಮ್ಮ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಹಂತ ಹಂತವಾಗಿ ಜನನ-ಮರಣ ಆನ್ಲೈನ್ ನೋಂದಣಿ ಪದ್ಧತಿಯನ್ನು ಜಾರಿಗೊಳಿಸಿದ್ದು, ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮೀಣ ದಿನಾಂಕ ೦೧-೦೪-೨೦೧೫ ರಿಂದ ಅನುಷ್ಟಾನಗೊಳಿಸಲಾಗಿರುತ್ತದೆ. ದಿನಾಂಕ ೦೧-೦೪-೨೦೧೮ ರಿಂದ ನಗರ ಸ್ಥಳಿಯ ಸಂಸ್ಥೆಗಳನ್ನು ಸಹ ಇ-ಜನ್ಮ (ಏಕರೂಪ ತಂತ್ರಾಂಶ) ದಲ್ಲಿ ಅಳವಡಿಸಿರುತ್ತಾರೆ ಎಂದು ಮಾಹಿತಿಯನ್ನು ನೀಡಿದರು.
ಇದಕ್ಕೆ ಸಂಬಂಧಿದಂತೆ ಯೂಸರ್ ಐಡಿಯನ್ನು ನೀಡಲಾಗಿದೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೧೪೦೨, ಪಟ್ಟಣ ಪ್ರದೇಶದಲ್ಲಿ ೬೯, ಒಟ್ಟು ೧೪೭೧ ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ೨೦೧೫ ಕ್ಕಿಂತ ಪೂರ್ವದಲ್ಲಿ ದಾಖಲಾದ ಜನನ-ಮರಣ ನೋಂದಣಿ ಘಟನೆಗಳನ್ನು ಡಿಜಿಟೈಜೇಶನ್ ಹಾಗೂ ಪೋರ್ಟಿಂಗ್ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.
ಉಪವಿಭಾಗಧಿಕಾರಿಗಳು ಬೆಳಗಾವಿ,ಚಿಕ್ಕೋಡಿ,ಬೈಲಹೊಂಗಲ, ಎಲ್ಲಾ ತಾಲೂಕಿನ ತಹಶೀಲ್ದಾರರು, ಜಿಲ್ಲಾ ಮತ್ತು ತಾಲೂಕಿನ ಮುಖ್ಯಾಧಿಕಾರಿಗಳು, ಹಾಗೂ ನಗರ ಮತ್ತು ಸ್ಥಳೀಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.