ಬೆಳಗಾವಿ :
ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ಧ್ವಜಗಳ ಮಾರಾಟವನ್ನು ನಿಷೇಧಿಸಲಾಗಿರುತ್ತದೆ. ಪ್ಲ್ಯಾಸ್ಟಿಕ್ ಧ್ವಜಗಳ ಮಾರಾಟ ಕಂಡುಬಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಜ.10) ನಡೆದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ಲ್ಯಾಸ್ಟಿಕ್ ಧ್ವಜಗಳ ಮಾರಾಟ ಕಂಡುಬಂದರೆ ಕೂಡಲೇ ವಶಪಡಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿಸಿದರು.
ಪ್ಲ್ಯಾಸ್ಟಿಕ್ ಧ್ವಜ ಮಾರಾಟ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನುಳಿದಂತೆ ಪ್ಲ್ಯಾಸ್ಟಿಕ್ ತ್ರಿವರ್ಣ ಸೇರಿದಂತೆ ಪ್ಲ್ಯಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಗಾಂಧೀಜಿ ಭೇಟಿ ಶತಮಾನೋತ್ಸವ- ಹತ್ತು ಕೋಟಿ ರೂಪಾಯಿ ಪ್ರಸ್ತಾವನೆ:
ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿ ಭಾಗವಹಿಸಿ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವರ್ಷವಿಡೀ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸ್ವಾತಂತ್ರ್ಯ ಯೋಧ ರಾಜೇಂದ್ರ ಕಲಘಟಗಿ ಅವರು ಸಭೆಯಲ್ಲಿ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರು ಭಾಗವಹಿಸಿದ ಶತಮಾನೋತ್ಸವವನ್ನು ವರ್ಷವಿಡೀ ಆಚರಿಸಲು ಅನುಕೂಲವಾಗುವಂತೆ ಹತ್ತು ಕೋಟಿ ರೂಪಾಯಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ. ಶ್ರೀನಿವಾಸ ಹಾಗೂ ಅಧಿಕಾರೇತರ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.