ಬೆಳಗಾವಿ :
ಸಾರ್ವಜನಿಕರ ಹಿತದೃಷ್ಟಿಯಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಕುರಿತು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಇತರ ಪಟಾಕಿಗಳ ಹಾಗೂ ಮಾರಾಟ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
ವಿವಿಧ ರೀತಿಯ ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಿಸಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು.
ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಆರ್ ಕೋಡ್ ಸಹ ಇರುತ್ತದೆ. ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿ ಅನಿಸುವುದಿಲ್ಲ ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಲಾಗಿದ್ದು, ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅದೇ ರೀತಿಯಲ್ಲಿ ಪಟಾಕಿಗಳು, ಸಿಡಿಯುವ ಜಾಗದಿಂದ 4 ಮೀಟರ ದೂರದಲ್ಲಿ 125 ಡೆಸಿಬಲ್ಗಳಿಗಿಂತ (Al) ಅಥವಾ 145 ಡೆಸಿಬಲ್ (C) PK ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ ಮಾರಾಟ ಹಾಗೂ ಬಳಕೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ.
ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ದ ವಲಯಗಳೆಂದು ಘೋಷಿಸಲ್ಪಟ್ಟ ಸ್ಥಳಗಳ (ಆಸ್ಪತ್ರೆ ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಬಳಕೆ ಮಾಡಬಾರದು.
ಒಂದುವೇಳೆ ಸದರಿ ಕ್ರಮಗಳು ಉಲ್ಲಂಘಿನೆಯಾಗಿರುವುದು ಕಂಡು ಬಂದಲ್ಲಿ ಅದಕ್ಕೆ ಕಾರಣರಾದವರ ಮೇಲೆ ಕಾಯ್ದೆ ಅನುಸಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.