ಬೆಳಗಾವಿ :
ಜೂ.29 ರಂದು ಬಕ್ರೀದ್ ಆಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಅನಧಿಕೃತವಾಗಿ ಪ್ರಾಣಿಗಳ ಹತ್ಯೆ ಅಥವಾ ಸಾಗಾಣಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಬ್ಬದ ಆಚರಣೆ ವೇಳೆ ಸರಕಾರದ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಬಕ್ರೀದ್ ಸಂದರ್ಭದಲ್ಲಿ ಅನಧಿಕೃತವಾಗಿ ಗೋವು ಹಾಗೂ ಒಂಟೆಗಳು ಸೇರಿದಂತೆ ಸಾಮೂಹಿಕ ಪ್ರಾಣಿಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಸಾಮೂಹಿಕ ಪ್ರಾಣಿಹತ್ಯೆ ತಡೆ ನಿಟ್ಟಿನಲ್ಲಿ ಸರಕಾರದ ಮಾರ್ಗಸೂಚಿ ಹಾಗೂ ನಿಯಮಾವಳಿ ಪ್ರಕಾರ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಜೂ. 29 ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ಈ ವೇಳೆ ಅಕ್ರಮವಾಗಿ ಪ್ರಾಣಿಗಳ ಸಾಗಾಣಿಕೆ ಮತ್ತು ಸಾಮೂಹಿಕ ವಧೆಯ ಮೇಲೆ ನಿಗಾ ವಹಿಸಬೇಕು.
ಈ ಕುರಿತು ಜನರಿಗೆ ಸೂಕ್ತ ತಿಳಿವಳಿಕೆ ನೀಡುವ ಮೂಲಕ ನಿಯಮಾವಳಿ ಪಾಲಿಸಲು ಮನವೊಲಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಎರಡು ಕಸಾಯಿಖಾನೆಗಳನ್ನು ಬಕ್ರೀದ್ ವೇಳೆ ಬಳಸಿಕೊಳ್ಳಲು ಅನುಕೂಲ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಮಾಜ ಬಾಂಧವರು, ಬಕ್ರೀದ್ ವೇಳೆ ಯಾವುದೇ ಅನಧಿಕೃತ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ; ಪ್ರತಿವರ್ಷದಂತೆ ಈ ಬಾರಿಯು ಆಚರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಲ್ಲದೇ ಸಾಮೂಹಿಕ ಪ್ರಾರ್ಥನೆ ನಡೆಯು ಸ್ಥಳಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅದೇ ರೀತಿ ಹಬ್ಬದ ದಿನ ಹಾಗೂ ಹಿಂದಿನದಿನ ಕೂಡ ನಗರದಲ್ಲಿ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಿಕೊಂಡರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಡಿಸಿಪಿ ಶೇಖರ್, ಪಶುಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್, ಮಹಾನಗರ ಪಾಲಿಕೆಯ ಅಧಿಕಾರಿಗಳು, ಮಹಮದ್ ಹನೀಫ್ ಬೇಪಾರಿ, ಮಹಮದ್ ಗೌಸ್ ಬೇಪಾರಿ, ಬಾಬುಲಾಲ್ ಮುಜಾವರ್, ಸಾಜೀದ್ ಸಯ್ಯದ್, ಮೊಹ್ಸಿನ್ ಬೇಪಾರಿ, ಝಾಕೀರ್ ಚೌಧರಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.