ಬೆಳಗಾವಿ :
ನಗರದ ಪ್ರಮುಖ ಹೋಟೆಲ್ ಹಾಗೂ ಬೀದಿಬದಿ ಆಹಾರ ಮಾರಾಟ ಅಂಗಡಿಗಳನ್ನು ನಿರಂತರ ಪರಿಶೀಲನೆ ನಡೆಸಬೇಕು ಗುಣಮಟ್ಟ ಹಾಗೂ ಸ್ವಚ್ಛತೆ ಕೊರತೆ ಕಂಡು ಬಂದಲ್ಲಿ, ದಂಡ ವಿಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜ.11) ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನೇಕ ಹೋಟೆಲ್ ಗಳಲ್ಲಿ ಅಜಿನೋಮೋಟು, ಸೇರಿದಂತೆ ಇತರೆ ನಿಷೇಧಿತ ರಾಸಾಯನಿಕ ಅಡುಗೆ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆ. ಇಂತಹ ಆಹಾರ ಪದಾರ್ಥಗಳನ್ನು ಬಳಕೆ ಮಾಡುವ ಹೋಟೆಲ್, ಅಂಗಡಿಗಳಲ್ಲಿ ಸಿಲ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಿರಂತರ ಪರಿಶೀಲನೆಗೆ ಸೂಚನೆ:
ನಗರದ ರಸ್ತೆ ಬದಿಗಳಲ್ಲಿ, ದೇವಸ್ಥಾನಗಳ ಆವರಣದಲ್ಲಿ, ಹೈವೇ ರಸ್ತೆ ಪಕ್ಕದಲ್ಲಿ ಇಂತಹ ಅನೇಕ ಅಂಗಡಿಗಳು ಇವೆ. ಕೂಡಲೇ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು. ನಿಷೇಧಿತ ಆಹಾರ ಪದಾರ್ಥಗಳ ಬಳಕೆ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಹಾಯ ಪಡೆದು ಸ್ಥಳದಲ್ಲೇ ಹೋಟೆಲ್ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಂತಹ ಹೋಟೆಲ್ ಗಳಿಗೆ ಈಗಾಗಲೇ ಪ್ರಸಕ್ತ ವರ್ಷದಲ್ಲಿ 1 ಲಕ್ಷ 14 ಸಾವಿರ ದಂಡ ವಿಧಿಸಲಾಗಿದೆ. ಅದೇ ರೀತಿಯಲ್ಲಿ ನಿಗದಿತ ಗುರಿಯಂತೆ ಹೊಸ ಹೋಟೆಲ್ ಅಂಗಡಿಗಳಿಗೆ ಲೈಸೆನ್ಸ್ ಪರವಾನಿಗೆ ನೀಡಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ವಿವರಿಸಿದರು.
ನಗರದ ಗೋವಾವೇಸ್ ನ ಕಾವುಕಟ್ಟಾ ವಿವಿಧ ಮಳಿಗೆಗಳಿಗೆ ಲೈಸೆನ್ಸ್ ನೀಡಲಾಗಿದೆ ಹಾಗೂ ಅವರಿಗೆ ಆಹಾರ ಸ್ವಚ್ಛತೆ, ಗುಣಮಟ್ಟದ ಕುರಿತು ಈಗಾಗಲೇ ಮಳಿಗೆಗಳ ಮಲಿಕರುಗಳಿಗೆ ತಿಳಿಸಲಾಗಿದೆ.
ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ, ಗುಣಮಟ್ಟ ಹಾಗೂ ನಿಷೇಧಿತ ಆಹಾರ ಪದಾರ್ಥಗಳ ಕುರಿತು ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಹಾರ ಸುರಕ್ಷತಾ ಅಧಿಕಾರಿ ಲೋಕೇಶ ಗನೂರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.