ಬೆಳಗಾವಿ :
ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಪ್ರತಿವರ್ಷದಂತೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಅಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಆ.1) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನೆರವೇರಿಸಿ ಸಾರ್ವಜನಿಕರಿಗೆ ಸಂದೇಶವನ್ನು ನೀಡಲಿದ್ದಾರೆ.
ಪ್ರತಿವರ್ಷದಂತೆ ಅಂದು ಎಲ್ಲ ಧಾರ್ಮಿಕ ಕೇಂದ್ರದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗುವುದು ಎಂದು ಹೇಳಿದರು.
ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ಯೋಧರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಸಮರ್ಪಕವಾಗಿ ಆಸನ ವ್ಯವಸ್ಥೆಯನ್ನು ಕಲ್ಪಿಸಬೇಕು.
ಎಲ್ಲ ಸರಕಾರಿ ಕಟ್ಠಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಪ್ರತಿಯೊಂದು ಇಲಾಖೆಯವರು ತಮ್ಮ ಇಲಾಖೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಜಿಲ್ಲಾ ಕ್ರೀಡಾಂಗಣದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
ವ್ಯಾಪಾರ ಮಳಿಗೆಗಳಿಗೂ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಸಂಭ್ರಮದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದರು.
ಪೊಲೀಸ್ ಇಲಾಖೆಯು ಪರೇಡ್ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಉಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳಿಗೆ ಪೂರ್ವಭಾವಿ ತರಬೇತಿಯನ್ನು ನೀಡಿ ಸಜ್ಜುಗೊಳಿಸಬೇಕು.
ಸಂಜೆ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ವಿವರಿಸಿದರು.
ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯುವ ವೇಳೆ ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ಲಾಸ್ಟಿಕ್ ಧ್ವಜ ಬಳಕೆಗೆ ನಿರ್ಬಂಧ:
ಪ್ಲ್ಯಾಸ್ಟಿಕ್ ಧ್ವಜ ಬಳಕೆಯನ್ನು ನಿರ್ಬಂಧಿಸಲಾಗಿರುತ್ತದೆ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಖಾದಿ ಬಟ್ಟೆಯ ಧ್ವಜವನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಅದೇ ರೀತಿ ಅಲಂಕಾರಕ್ಕೂ ಕೂಡ ಪ್ಲ್ಯಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡದೇ ಮರುಬಳಕೆಗೆ ಸಾಧ್ಯವಾಗುವಂತಹ ಕಾಗದ ಅಥವಾ ಬಟ್ಟೆಯನ್ನು ಬಳಸಬೇಕು ಎಂದು ಹೇಳಿದರು.
ಗಣ್ಯರ ಸಲಹೆಗಳು:
ಹಿರಿಯ ಪತ್ರಕರ್ತ ಅರವಿಂದ ದೇಶಪಾಂಡೆ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ನರಗುಂದ ಬಾಬಾಸಾಹೇಬ್ ದಂಪತಿಯ ಸಮಾಧಿ ಸಿಪಿಎಡ್ ಮೈದಾನದ ಬಳಿ ಇದ್ದು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅವರ ಸಮಾಧಿಗೆ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಕಾಸ ಕಲಘಟಗಿ ಅವರು ಪ್ಲಾಸ್ಟಿಕ್ ಧ್ವಜವನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.
ಶ್ರೀನಿವಾಸ ತಾಳೂಕರ ಮಾತನಾಡಿ, ಇತತೀಚೆಗೆ ಕೋಟೆ ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ್ ಪೇದೆ ಸೇರಿದಂತೆ ಅತ್ಯುತ್ತಮ ಕೆಲಸ ಮಾಡಿದ ಸಾರ್ವಜನಿಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಮಲ್ಲೇಶ್ ಚೌಗಲೆ ಅವರು ಮಾತನಾಡಿ, ಸ್ವಾತಂತ್ರ್ಯ ಯೋಧರನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು.
ಆಗಸ್ಟ್ 15 ರಂದು ಸಂಜೆ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಯಲ್ಲಪ್ಪ ಹುದಲಿ ಅವರು ಸಭೆಯಲ್ಲಿ ವಿನಂತಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಯೋಧರಾದ ರಾಜೇಂದ್ರ ಕಲಘಟಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.