ಬೆಳಗಾವಿ :
ಜಿಲ್ಲೆಯಾದ್ಯಂತ ಹಲವಾರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ವಾಟರ್ ಫಾಲ್ಸ್ ಗಳ ಸಮೀಪ ಸಾರ್ವಜನಿಕರು ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಫಾಲ್ಸ್ ಸಮೀಪಕ್ಕೆ ತೆರಳಿದಾಗ ಕಾಲುಜಾರಿ ಬಿದ್ದು ಅನೇಕ ಜನರು ಪ್ರಾಣ ಕಳೆದುಕೊಂಡ ಘಟನೆಗಳು ರಾಜ್ಯದಾದ್ಯಂತ ಸಂಭವಿಸುತ್ತಿರುವುದು ವರದಿಯಾಗಿದೆ.
ಇಂತಹ ದುರ್ಘಟನೆಗಳನ್ನು ತಪ್ಪಿಸುವ ಉದ್ಧೇಶದಿಂದ ಜಿಲ್ಲೆಯಲ್ಲಿರುವ ಫಾಲ್ಸ್ ಸಮೀಪ ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೇ ಅರಣ್ಯ ಪ್ರದೇಶದಲ್ಲಿರುವ ಫಾಲ್ಸ್ ಗಳಿಗೆ ಯಾವುದೇ ಸಾರ್ವಜನಿಕರು ಭೇಟಿ ನೀಡುವುದನ್ನು ಈಗಾಗಲೇ ನಿರ್ಬಂಧಿಸಲಾಗಿರುತ್ತದೆ.
ಗೋಕಾಕ ಸೇರಿದಂತೆ ಜಿಲ್ಲೆಯ ಕೆಲವು ಪ್ರಸಿದ್ಧ ಫಾಲ್ಸ್ ಗಳನ್ನು ಪ್ರವಾಸಿಗರು ದೂರದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಫಾಲ್ಸ್ ಬಳಿ ನಿಗಾ ವಹಿಸಲು ಅರಣ್ಯ ಇಲಾಖೆಯ ಸಿಬ್ಬಂದಿ, ಪ್ರವಾಸಿಮಿತ್ರರು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.
ಫಾಲ್ಸ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಕೂಡ ಅಪಾಯಕಾರಿ ಸ್ಥಳಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.