ಉಡುಪಿ : ಕೆಜಿಎಫ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಪ್ರತಿಭಾನ್ವಿತ ನಟ, ಕಲಾ ನಿರ್ದೇಶಕ ದಿನೇಶ ಮಂಗಳೂರು ಇಂದು ಭಾನುವಾರ (ಆಗಸ್ಟ್ 25) ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ದಿನೇಶ ಮಂಗಳೂರು ಅವರು ಕಳೆದ ಐದು ದಿನಗಳಿಂದ ಪಾರ್ಶ್ವವಾಯುವಿಗೆ ಕುಂದಾಪುರದ ಸರ್ಜನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ‘ಕಾಂತಾರ’ ಚಿತ್ರದ ಶೂಟಿಂಗ್ ವೇಳೆ ಅವರಿಗೆ ಪಾರ್ಶ್ವವಾಯು ಆಗಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಒಂದು ವಾರದ ಹಿಂದೆ ಅವರು ಮತ್ತೆ ಅಸ್ವಸ್ಥರಾಗಿದ್ದರು.
ಕೆಜಿಎಫ್ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ ಅವರು ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ, ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು.
‘ಉಳಿದವರು ಕಂಡಂತೆ’, ‘ರಿಕ್ಕಿ’, ‘ಕಿರಿಕ್ ಪಾರ್ಟಿ’ ಹಾಗೂ ಪುನೀತರಾಜಕುಮಾರ ಅವರ ‘ರಣ ವಿಕ್ರಮ’ ಚಿತ್ರದಲ್ಲಿನ ಕುಲಕರ್ಣಿ ಪಾತ್ರದಲ್ಲಿನ ಅವರ ನಟನೆ ಎಲ್ಲರ ಗಮನಸೆಳೆದಿತ್ತು. ‘‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳಲ್ಲಿ ದಿನೇಶ ಮಂಗಳೂರು ಅಭಿನಯ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತ್ತು. ‘ವೀರ ಮದಕರಿ’, ‘ಚಂದ್ರಮುಖಿ ಪ್ರಾಣಸಖಿ’ ಮುಂತಾದ ಸಿನಿಮಾಗಳಿಗೆ ಅವರು ಕಲಾ ನಿರ್ದೇಶನ ಕೂಡ ಮಾಡಿದ್ದಾರೆ. ಈ ವರ್ಷ ತೆರೆಕಂಡ ‘ಭುವನಂ ಗಗನಂ’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾಗಳಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು