ಬೆಳಗಾವಿ: ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಠಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಹುಲಿಗೆವ್ವ ಹೆಚ್ ಕುಕನೂರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮುತ್ತಣ್ಣ ಸಿ.ಎ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಯೋಜನಾ ವ್ಯಾಪ್ತಿಯ ಹಳೇ ಹುಬ್ಬಳಿ ವಲಯದ ಸಮೀಪವಿರುವ ಗಬ್ಬೂರು ಕ್ರಾಸ್ ಬಳಿ ಇರುವ ಆಹಾರ ಗೋದಾಮಿನಲ್ಲಿ ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಠಿಕ ಸಾಮಗ್ರಿಗಳಾದ ತೊಗರಿ ಬೇಳೆ, ಹೆಸರು ಕಾಳು, ಬೆಲ್ಲ, ಸಕ್ಕರೆ, ಗೋಧಿಹಿಟ್ಟನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಧಾರವಾಡ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಪೌಷ್ಠಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಗನವಾಡಿಗೆ ಸರಬರಾಜು ಮಾಡಿರುವಂತ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳು ಪತ್ತೆಯಾಗಿದ್ದವು. ಸದರಿ ಸಾಮಗ್ರಿಗಳ ಅಕ್ರಮ ದಾಸ್ತಾನಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವಂತೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
* *ಪ್ರಕರಣದ ಸಮಗ್ರ ತನಿಖೆಗೆ ಸಚಿವರ ಆದೇಶ*
ಅಕ್ರಮ ದಾಸ್ತಾನು ಕುರಿತು ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಜೊತೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೂ ಆದೇಶಿಸಿದ್ದಾರೆ.