ಬೆಂಗಳೂರು: ಧರ್ಮಸ್ಥಳ ಪ್ರಕರಣ ಕುರಿತು ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಭಾನುವಾರ ತಮ್ಮದೇ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಧರ್ಮಸ್ಥಳ ದೇವಸ್ಥಾನ ವ್ಯಾಪ್ತಿಯಲ್ಲಿ ಶವ ಹೂತಿರುವುದಾಗಿ ದೂರು ನೀಡಲು ಬಂದ ವ್ಯಕ್ತಿಯು ತಂದಿದ್ದ ತಲೆ ಬುರುಡೆಯ ಪೂರ್ವಾಪರಗಳನ್ನು ವಿಚಾರಿಸದೆ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ ಎಂದು ಅವರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಮಾಧ್ಯಮದವರೊಂದಗೆ ಮಾತನಾಡಿದ ಅವರು, ಯಾವುದೇ ಶವವನ್ನು ಭೂಮಿಯಲ್ಲಿ ಹೂತ ನಂತರ ಅದನ್ನು ಹೊರತೆಗೆಯಲು ಕಾನೂನಿನಲ್ಲಿ ನಿರ್ದಿಷ್ಟ ನಿಯಮಾವಳಿಗಳಿವೆ. ತಾಲೂಕು ಮ್ಯಾಜಿಸ್ಟ್ರೇಟ್ ಅವರ ಅನುಮತಿ ಮತ್ತು ಅವರ ಉಪಸ್ಥಿತಿಯಲ್ಲಿ ದೇಹವನ್ನು ಹೊರತೆಗೆಯಬೇಕಾಗುತ್ತದೆ, ಇದನ್ನು ‘ಎಕ್ಸ್ಯೂಮ್’ (Exhume) ಎಂದು ಹೇಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ ಆದರೆ, ಈ ಪ್ರಕರಣದಲ್ಲಿ ತಲೆಬುರುಡೆಯನ್ನು ಕಾನೂನುಬಾಹಿರವಾಗಿ ತರಲಾಗಿದ್ದು, ಇದನ್ನು ಆ ವ್ಯಕ್ತಿ ಎಲ್ಲಿಂದ, ಹೇಗೆ ತಂದೆ ಮತ್ತು ಯಾರ ಆದೇಶದ ಮೇರೆಗೆ ಅದನ್ನು ಹೊರಕ್ಕೆ ತೆಗೆಯಲಾಗಿದೆ ಎಂಬುದನ್ನು ಮೊದಲು ವಿಚಾರಣೆ ಮಾಡಬೇಕಿತ್ತು ಎಂದು ರಾಜಣ್ಣ ಹೇಳಿದ್ದಾರೆ. ಇದು ಕೇವಲ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚು ಎಂದು ಅವರು ಆರೋಪಿಸಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿ ತಲೆ ಬುರುಡೆ ತರಲಾಗಿದೆಯೇ ಎಂದು ಮೊದಲು ಪ್ರಶ್ನಿಸಬೇಕಾಗಿತ್ತು, ತಲೆ ಬುರುಡೆ ಎಲ್ಲಿ ತೆಗೆದೆ, ಇದರ ದೇಹ ಎಲ್ಲಿದೆ ಎಂದು ಕೇಳಬೇಕಾಗಿತ್ತು. ಇದನ್ನ ತೆಗೆಯಲು ನಿನಗೆ ಅಧಿಕಾರ ಕೊಟ್ಟವರು ಯಾರು? ಎಂದು ತಲೆಬುರುಡೆ ತಂದವನನ್ನು ಮೊದಲು ವಿಚಾರಣೆ ಮಾಡಬೇಕಿತ್ತು. ಆತನನ್ನು ವಿಚಾರಣೆ ಮಾಡದೇ ತಲೆ ಬುರುಡೆ ಇಟ್ಕೊಂಡು ಧರ್ಮಸ್ಥಳಕ್ಕೆ ದೇಶದೆಲ್ಲೆಡೆ ಅಪಕೀರ್ತಿ ತರುವ ಪ್ರಯತ್ನ ನಡೆಯಿತು ಎಂದು ರಾಜಣ್ಣ ಆರೋಪಿಸಿದ್ದಾರೆ.
ಸರಿಯಾಗಿ ಪರಿಶೀಲನೆ ಮಾಡದೇ ವಿನಾಕಾರಣ ಕೆಲವರ ಮನೆಗಳ ಮುಂದೆ ಹೋಗಿ ಗುಂಡಿ ತೋಡಲಾಗಿದೆ. ಪಾಪ ಆ ಮನೆಗಳವರಿಗೆ ತೊಂದರೆ ಕೊಟ್ಟಿದ್ದಾರೆ. ಪ್ರಾರಂಭಿಕ ಹಂತದಲ್ಲೇ ಸಾಮಾನ್ಯ ಜ್ಞಾನ ಬಳಸಿ ವಿಚಾರಣೆ ಪ್ರಾರಂಭ ಮಾಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ, ತಾವು ಸಹ ಇದನ್ನೇ ಆರಂಭದಿಂದಲೂ ಪ್ರಶ್ನಿಸಿದ್ದೆವು. ಹೂತು ಹಾಕಿದ್ದ ಶವದ ಬುರುಡೆ ಇವರಿಗೆ ಸಿಕ್ಕಿದ್ದೆಲ್ಲಿ ಎಂಬುದನ್ನು ಪತ್ತೆಹಚ್ಚಲು ಸರ್ಕಾರ ನಿರ್ದೇಶನ ನೀಡಬೇಕಿತ್ತು ಎಂದು ಬಿಜೆಪಿ ಹೇಳಿದೆ.