ಮಂಗಳೂರು : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಆರೋಪಿತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತನ್ನ ತನಿಖೆಯನ್ನು ವಿಸ್ತರಿಸಿದ್ದು, ಮಾಸ್ಕ್ ಮ್ಯಾನ್ ಚಿನ್ನಯ್ಯನ (Chinnayya) ವಿರುದ್ಧ ಹೊಸ ಸೆಕ್ಷನ್ಗಳನ್ನು ಹಾಕಿದೆ. ಸುಳ್ಳು ಸಾಕ್ಷ್ಯಾಧಾರ, ನಕಲಿ ದಾಖಲೆ ಮತ್ತು ಸುಳ್ಳು ಸಾಕ್ಷ್ಯಾಧಾರಗಳ ಸೃಷ್ಟಿಗೆ ಸಂಬಂಧಿಸಿದಂತೆ ದೂರುದಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಹಲವು ಹೆಚ್ಚುವರಿ ಆರೋಪಗಳನ್ನು ಹೊರಿಸಿದೆ.
“ಹೊಸದಾಗಿ ಸೇರಿಸಲಾದ ವಿಭಾಗಗಳು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಸಲ್ಲಿಸಲಾದ ತಲೆಬುರುಡೆಗೆ ಮಾತ್ರ ಸಂಬಂಧಿಸಿವೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ತಲೆ ಬುರುಡೆ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನೇ ಎ-1 ಆರೋಪಿಯಾಗಿದ್ದಾನೆ. ಸುಳ್ಳು ಮಾಹಿತಿಯನ್ನು ಕೊಟ್ಟಿದ್ದರಿಂದ ಆತನನ್ನು ಬಂಧಿಸಲಾಗಿದೆ. ಇದು ಕಪೋಲಕಲ್ಪಿತ ಷಡ್ಯಂತ್ರ ಎಂದು ಹೇಳಿರುವ ಎಸ್ಐಟಿ ಹಳೇ ಸೆಕ್ಷನ್ಗಳನ್ನು ಕೈಬಿಟ್ಟು, ನೂತನವಾಗಿ ಬಿಎನ್ಎಸ್ 336, 230, 231, 229, 227, 228, 240, 236, 233 ಹಾಗೂ 248 ಸೆಕ್ಷನ್ ಸೇರಿದಂತೆ 10 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ಕೊಟ್ಟ ಆರೋಪದಲ್ಲಿ ಮಹೇಶ ಶೆಟ್ಟಿ ತಿಮರೋಡಿ (Mahesh Shetty Thimarodi) ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ಎರಡು ದಿನಗಳ ಹಿಂದೆ ದಾಳಿ ನಡೆಸಿ ಒಂದಷ್ಟು ಸಾಕ್ಷ್ಯಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ತನಿಖಾಧಿಕಾರಿ ದಯಾಮಾ ನೇತೃತ್ವದಲ್ಲಿ ಶೋಧಕಾರ್ಯ ನಡೆದಿದ್ದು ಚಿನ್ನಯ್ಯನ ಮೊಬೈಲ್, ದಾಖಲೆ ಪತ್ರ, ಬಟ್ಟೆಗಳ ಬ್ಯಾಗ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಧರ್ಮಸ್ಥಳ ದೇವಾಲಯ ಆಡಳಿತದ ಮಾಜಿ ನೈರ್ಮಲ್ಯ ಕೆಲಸಗಾರ ಅನೇಕ ಶವಗಳನ್ನು ಹಲವಾರು ಸ್ಥಳಗಳಲ್ಲಿ ಹೂಳಿದ್ದೇನೆ ಎಂದು ಹೇಳಿಕೊಂಡಿದ್ದ, ಹಾಗೂ ಆರಂಭದಲ್ಲಿ ತಲೆಬುರುಡೆಯನ್ನು ಸಾಕ್ಷಿಯಾಗಿ ಪ್ರಸ್ತುತಪಡಿಸಿದ್ದ.
ಈಗ ಈತನ ಮೇಲೆಯೇ ಸುಳ್ಳು ಸಾಕ್ಷ್ಯಾಧಾರಗಳ ಸೃಷ್ಟಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿಯ ಆರೋಪ ಹೊರಿಸಲಾಗಿದೆ.
ಈ ವಾರದ ಆರಂಭದಲ್ಲಿ, ಪೊಲೀಸರು “ಮಾಸ್ಕ್ ಮ್ಯಾನ್” ಎಂದೂ ಕರೆಯಲ್ಪಡುವ ಚಿನ್ನಯ್ಯ ಎಂಬ ಧರ್ಮಸ್ಥಳ ದೇವಾಲಯದ ಆಡಳಿತದ ಮಾಜಿ ಸ್ವಚ್ಛತಾ ಕೆಲಸಗಾರ ಚಿನ್ನಯ್ಯ ಎಂಬಾತನನ್ನು ರಾತ್ರಿಯಿಡೀ ವಿಚಾರಣೆ ನಡೆಸಿದ ನಂತರ ಬಂಧಿಸಿದರು. ಈತ ಸುಳ್ಳು ಮಾಹಿತಿ ನೀಡಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಿದ್ದಾನೆ ಎಂದು ಆರೋಪಿಸಿದರು. ಈತ ಸೂಚಿಸಿದ 15 ಸ್ಥಳಗಳ ಪೈಕಿ ಒಬ್ಬ ಪುರುಷನ ಅಸ್ಥಿಪಂಜರದ ಅವಶೇಷಗಳನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ.